ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ಸೌತ್ ಅಂಡರ್ ವರ್ಲ್ಡ್ ರಕ್ತಸಿಕ್ತವಾಗಿದೆ. ಹಳೆ ಹಗೆತನ ಹಾಗೂ ರಿವೇಂಜ್ ಕಿಲ್ಲಿಂಗ್ಗೆ ಬೆಂಗಳೂರು ದಕ್ಷಿಣ ಭಾಗದ ಕುಖ್ಯಾತ ರೌಡಿ ಶೀಟರ್ ಹಲ್ಮುರ್ಕ ರಾಜಾ ಬಲಿಯಾಗಿದ್ದಾನೆ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ರಾಜ್ಯದಲ್ಲಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ, ಭೂಗತ ಜಗತ್ತಿನ ಈ ಸರಣಿ ಕೊಲೆಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿವೆ.
ಕೊಲೆಯಾದ ರೌಡಿ ರಾಜಾ ಅಲಿಯಾಸ್ ಹಲ್ಮುರ್ಕ ರಾಜಾ, ಮಾಜಿ ರೌಡಿ ಜೇಡ್ರಳ್ಳಿ ಕೃಷ್ಣಪ್ಪನ ಬಲಗೈ ಭಂಟ ಎಲೆನಾಗನ ಮಗನಾಗಿದ್ದು, ಬೆಂಗಳೂರು ದಕ್ಷಿಣದ ಕುಖ್ಯಾತ ರೌಡಿ ಅರಸಯ್ಯನ ಸಿಂಡಿಕೇಟ್ನಲ್ಲಿ ಗುರುತಿಸಿಕೊಂಡಿದ್ದ. ಹಲವಾರು ಕೊಲೆ, ಕೊಲೆಯತ್ನ ಹಾಗೂ ದರೋಡೆ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ.
ಕೆಲ ವರ್ಷಗಳ ಹಿಂದೆ ಬನಶಂಕರಿ ರೌಡಿ ಶೀಟರ್ ಕುಟ್ಟಿ ಅಲಿಯಾಸ್ ಸ್ಟಾಂಡ್ ಕುಟ್ಟಿಯನ್ನು ಆತನ ಎರಡನೇ ಹೆಂಡತಿ ಮನೆಯಲ್ಲಿ ನಡುರಾತ್ರಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಶಿವನ ಜೊತೆ ಹಲ್ಮುರ್ಕ ರಾಜಾ ಕೂಡ ಪರಪ್ಪನ ಅಗ್ರಹಾರ ಜೈಲು ಸೇರಿದ್ದ. ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದ ರಾಜಾ, ನಾನು ಕುಟ್ಟಿ ಹುಡುಗರೊಂದಿಗೆ ರಾಜಿ ಮಾಡಿಕೊಂಡಿದ್ದೇನೆ ಎಂದು ಓಡಾಡುತ್ತಿದ್ದ ಎನ್ನಲಾಗಿದೆ. ಆದರೆ, ಈಗ ಅದೇ ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಂದಿರಾ ಗಾಂಧಿ ಸರ್ಕಲ್ನಲ್ಲಿ ಎದುರಾಳಿಗಳು ಈತನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಕೊಲೆಯಾದ ಹಲ್ಮುರ್ಕ ರಾಜಾ ಚನ್ನಪಟ್ಟಣದಲ್ಲಿ ಒಂದು ಕೊಲೆ ಮಾಡಿದ್ದಲ್ಲದೆ, ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚನ್ನಪಟ್ಟಣ ಮೂಲದ ಇಬ್ಬರು ರೌಡಿಗಳ ಡಬಲ್ ಮರ್ಡರ್ ಕೇಸ್ನಲ್ಲಿ ಪ್ರಮುಖ ಆರೋಪಿಯಾಗಿದ್ದ. ಚನ್ನಪಟ್ಟಣದ ಮಾಜಿ ರೌಡಿ ಮುದ್ದುಕೃಷ್ಣನಿಂದ ಸುಪಾರಿ ಪಡೆದು, ಗುಂಡ ಅಲಿಯಾಸ್ ಶಿವಕುಮಾರ್ ಜೊತೆ ಸೇರಿ ರಾಜಾ ಈ ಕೃತ್ಯ ಎಸಗಿದ್ದ ಎನ್ನಲಾಗಿದೆ.
ಇತ್ತೀಚೆಗೆ ಹಾಸನ ಕೋರ್ಟ್ ಮುಂಭಾಗ ರೌಡಿ ಶೀಟರ್ ಆವಲಹಳ್ಳಿ ಮಂಜೇಶ್ ಕೊಲೆಯಾದ ಬೆನ್ನಲ್ಲೇ ಈಗ ರಾಜನ ಕಗ್ಗೊಲೆಯಾಗಿದ್ದು, ಸೌತ್ ಅಂಡರ್ ವರ್ಲ್ಡ್ ಮತ್ತೊಮ್ಮೆ ಹೈ ಅಲರ್ಟ್ ಆಗಿದೆ. ರಿವೇಂಜ್ ಕಿಲ್ಲಿಂಗ್ ಭೀತಿಯಿಂದ ಹಲವು ರೌಡಿಗಳು ಬೆಂಗಳೂರು ಬಿಟ್ಟು ಓಡಿ ಹೋಗುತ್ತಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧೆಡೆ ಕ್ರೈಂ ರೇಟ್ ಹೆಚ್ಚುತ್ತಿರುವುದು ಆತಂಕ ತಂದಿದೆ:
ಭೀಮಾತೀರ: ಒಂದೇ ಕುಟುಂಬದ ಆರು ಜನರ ಶೂಟೌಟ್ ಮರ್ಡರ್.
ಇಂಡಿ: ಮಾಜಿ ಸೈನಿಕನ ಕೈಕತ್ತರಿಸಿ ಮುಸುಕುಧಾರಿಗಳು ಪರಾರಿ.
ಹೊಸಕೋಟೆ: ಮುಸ್ಲಿಂ ರೌಡಿಯೊಬ್ಬನ ಬ್ರೂಟಲ್ ಮರ್ಡರ್.
ಶಿವಮೊಗ್ಗ: ರೌಡಿ ಹಂದಿ ಅಣ್ಣಿ ಹುಡುಗರಿಂದ ರೌಡಿ ನರಸಿಂಹನ ಕೊಲೆ.
ರಾಜ್ಯದ ಪ್ರತಿಯೊಂದು ತಾಲೂಕಿನಲ್ಲಿ ‘ರೌಡಿ ಸ್ಕ್ವಾಡ್’ ರಚಿಸುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಹಾಗೂ ರೌಡಿ ಶೀಟರ್ಗಳ ಮೇಲೆ ಹದ್ದಿನ ಕಣ್ಣಿಡುವಂತೆ ಮಾನ್ಯ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಇದರ ಬೆನ್ನಲ್ಲೇ ಬೆಂಗಳೂರು ಪೊಲೀಸರು ನಿರಂತರವಾಗಿ ರೌಡಿ ಪರೇಡ್, ತಡರಾತ್ರಿ ರೌಡಿಗಳ ಮನೆಗಳ ಮೇಲೆ ದಾಳಿ, ವೆಹಿಕಲ್ ಚೆಕಿಂಗ್ ಹಾಗೂ ಉದಯೋನ್ಮುಖ ರೌಡಿಗಳನ್ನು (Budding Rowdies) ರೌಂಡ್ ಅಪ್ ಮಾಡುತ್ತಿದ್ದರೂ ಸಹ, ಈ ರಕ್ತಚರಿತ್ರೆಗೆ ಮಾತ್ರ ಬ್ರೇಕ್ ಬಿದ್ದಿಲ್ಲ. ಸದ್ಯ ಇಂದಿರಾ ಗಾಂಧಿ ಸರ್ಕಲ್ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ವರದಿ :- ಪರಶಿವ ಧನಗೂರು ( ಉದಯ ಟಿವಿ ಶಿವು)