Skip to main content

Police Roundup

ವನ್ಯಜೀವಿ ಸಂರಕ್ಷಕ, ಕಾಳಿಂಗ ಸರ್ಪಗಳ ಆಪ್ತ ಗೆಳೆಯ ಮಹಮ್ಮದ್ ಅನೀಸ್ ವಿಧಿವಶ: ನಾಗರಹೊಳೆಯಲ್ಲಿ ಶೋಕ ಸಾಗರ

Share News

ನಾಗರಹೊಳೆ: ವನ್ಯಜೀವಿ ಸಂರಕ್ಷಣೆ ಮತ್ತು ಉರಗಗಳ ಅಧ್ಯಯನ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಖ್ಯಾತ ಉರಗತಜ್ಞ “ಸ್ನೇಕ್ ಅನೀಸ್” ಎಂದೇ ಪ್ರಸಿದ್ಧರಾಗಿದ್ದ ಮಹಮ್ಮದ್ ಅನೀಸ್ (55) ಅವರು ಶ್ವಾಸಕೋಶದ ಸೋಂಕಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರ ಅಗಲಿಕೆ ವನ್ಯಜೀವಿ ಮತ್ತು ಪರಿಸರ ಸಂರಕ್ಷಣಾ ವಲಯಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.

 

ಮೂಲತಃ ಬೆಂಗಳೂರಿನವರಾದ ಮಹಮ್ಮದ್ ಅನೀಸ್ ಅವರು, ಅಪಾಯಕಾರಿ ಪರಿಸ್ಥಿತಿಗಳಲ್ಲೂ ಅತ್ಯಂತ ಧೈರ್ಯ ಮತ್ತು ತಾಳ್ಮೆಯಿಂದ ಸಾವಿರಾರು ಹಾವುಗಳನ್ನು ರಕ್ಷಿಸಿ ಜನರ ಪ್ರಾಣ ಕಾಪಾಡಿದ್ದರು. ಕೇವಲ ಹಾವುಗಳನ್ನು ಹಿಡಿಯುವುದಷ್ಟೇ ಅಲ್ಲದೆ, ಅವುಗಳ ಬಗ್ಗೆ ಸಾರ್ವಜನಿಕರಲ್ಲಿದ್ದ ಮೂಢನಂಬಿಕೆಗಳನ್ನು ಹೋಗಲಾಡಿಸಲು ನಿರಂತರ ಜಾಗೃತಿ ಮೂಡಿಸುತ್ತಿದ್ದರು. ಚೆನ್ನೈನ ವಿಶ್ವಪ್ರಸಿದ್ಧ ಸ್ನೇಕ್ ಪಾರ್ಕ್‌ನಲ್ಲಿ ಸೇವೆ ಸಲ್ಲಿಸಿದ್ದ ಇವರು, ಅಂತರರಾಷ್ಟ್ರೀಯ ಖ್ಯಾತಿಯ ಹರ್ಪೆಟಾಲಜಿಸ್ಟ್ ರೊಮುಲಸ್ ವಿಟೇಕರ್ ಅವರೊಂದಿಗೆ ಕೆಲಸ ಮಾಡಿದ ಅಪಾರ ಅನುಭವ ಹೊಂದಿದ್ದರು.

 

ವಿಶೇಷವಾಗಿ ಕಾಳಿಂಗ ಸರ್ಪಗಳ (King Cobra) ಕುರಿತು ಆಳವಾದ ಅಧ್ಯಯನ ನಡೆಸಿದ್ದ ಅನೀಸ್ ಅವರು, ಅವುಗಳ ಜೀವನಚಕ್ರದ ಕುರಿತು ಜಗತ್ತಿನ ಪ್ರಸಿದ್ಧ ವಾಹಿನಿಗಳಾದ ನ್ಯಾಷನಲ್ ಜಿಯೋಗ್ರಫಿ (National Geographic) ಮತ್ತು ಅನಿಮಲ್ ಪ್ಲಾನೆಟ್ (Animal Planet) ಸಂಸ್ಥೆಗಳಿಗೆ ಸಾಕ್ಷ್ಯಚಿತ್ರಗಳನ್ನು (Documentaries) ನಿರ್ಮಿಸಿಕೊಡುವ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದರು.

 

ಸುಮಾರು ಒಂದು ದಶಕದ ಹಿಂದೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಹಳ್ಳಿಯಲ್ಲಿ ಜಮೀನು ಖರೀದಿಸಿ “ವೈಲ್ಡ್ನೆಸ್ ರೀಟ್ರೀಟ್” ಸಂಸ್ಥೆಯನ್ನು ಸ್ಥಾಪಿಸಿದ್ದರು. ಇದರ ಮೂಲಕ ವನ್ಯಜೀವಿ ಸಂರಕ್ಷಣೆ ಹಾಗೂ ಪರಿಸರ ಶಿಕ್ಷಣ ನೀಡುತ್ತಿದ್ದರು.

 

​ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿಯ ಮುಖ್ಯದ್ವಾರವನ್ನು ಅತ್ಯಂತ ಆಕರ್ಷಕವಾಗಿ ವಿನ್ಯಾಸಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

 

​ಆನೆ ದಾಳಿಗೆ ಬಲಿಯಾಗಿದ್ದ ನಾಗರಹೊಳೆ ಉದ್ಯಾನದ ಮಾಜಿ ಮುಖ್ಯಸ್ಥ ದಿವಂಗತ ಮಣಿಕಂದನ್ ಅವರ ಸ್ಮರಣಾರ್ಥ ನಿರ್ಮಿಸಲಾದ ಕಳ್ಳಭೇಟೆ ತಡೆ ಶಿಬಿರದ (Anti-Poaching Camp) ವಿನ್ಯಾಸದಲ್ಲೂ ಇವರು ಪ್ರಮುಖ ಪಾತ್ರ ವಹಿಸಿದ್ದರು.

 

ಮಹಮ್ಮದ್ ಅನೀಸ್ ಅವರ ಅಕಾಲಿಕ ನಿಧನಕ್ಕೆ ನಾಗರಹೊಳೆ ಹುಣಸೂರು ಉಪವಿಭಾಗದ ಎಸಿಎಫ್ ಲಕ್ಷ್ಮೀಕಾಂತ್, ನಾಗಮಂಗಲ ವಿಭಾಗದ ಎಸಿಎಫ್ ಶಿವರಾಂ ಸೇರಿದಂತೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು, ಸಿಬ್ಬಂದಿ ಹಾಗೂ ವನ್ಯಜೀವಿ ಪ್ರೇಮಿಗಳು ತೀವ್ರ ಸಂತಾಪ ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin