ಚಿಂತಾಮಣಿ: ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿ, ಎಂಡಿಎಂಎ (MDMA) ಮಾದಕ ವಸ್ತುವಿನೊಂದಿಗೆ ಓರ್ವ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಾತ್ಮಿದಾರರಿಂದ ದೊರೆತ ಖಚಿತ ಮಾಹಿತಿ ಆಧರಿಸಿ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು, ಠಾಣಾ ಸರಹದ್ದಿನ ಕನ್ನಂಪಲ್ಲಿ ಕೆರೆಯ ಬಳಿ ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ ಎಂಡಿಎಂಎ ಮಾದಕ ವಸ್ತುವನ್ನು ಇಟ್ಟುಕೊಂಡಿದ್ದ ಆರೋಪಿಯನ್ನು ಮಾಲು ಸಮೇತ ಬಂಧಿಸಲಾಗಿದೆ.
ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಸಂಖ್ಯೆ (Crime No): 256/2026 ರಂತೆ ಎನ್.ಡಿ.ಪಿ.ಎಸ್ (NDPS) ಕಾಯ್ದೆಯ ಕಲಂ 8(ಸಿ), 21, 22 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಕಾನೂನು ಕ್ರಮ ಜರುಗಿಸಲಾಗಿದೆ.
ಸಮಯಪ್ರಜ್ಞೆ ಮೆರೆದು ಕಾರ್ಯಾಚರಣೆ ನಡೆಸಿ, ಮಾದಕ ವಸ್ತು ಜಪ್ತಿ ಮಾಡುವಲ್ಲಿ ಯಶಸ್ವಿಯಾದ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿಗೆ ಸಾರ್ವಜನಿಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
