ಚಿಕ್ಕೋಡಿ: ಸಂಚಾರ ನಿಯಮ ಉಲ್ಲಂಘನೆ ತಡೆಯಲು ಅಳವಡಿಸಲಾಗಿರುವ ಕೃತಕ ಬುದ್ಧಿಮತ್ತೆಯ (AI) ಕ್ಯಾಮೆರಾವೊಂದು ಮಾಡಿದ ಎಡವಟ್ಟಿನಿಂದಾಗಿ ಕಾರು ಮಾಲೀಕರೊಬ್ಬರು ತಬ್ಬಿಬ್ಬಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.
ಅಥಣಿ ಪಟ್ಟಣದ ನಿವಾಸಿ ಸುಭಾಷ್ ಬೋಜನೆ ಎಂಬುವವರೇ ಈ ವಿಚಿತ್ರ ದಂಡದ ನೋಟಿಸ್ಗೆ ಒಳಗಾದ ಕಾರು ಮಾಲೀಕ.
ಘಟನೆಯ ವಿವರ:
ಪಟ್ಟಣದ ಅಂಬೇಡ್ಕರ್ ಸರ್ಕಲ್ನಲ್ಲಿ ಚಲಿಸುತ್ತಿದ್ದ ಸುಭಾಷ್ ಅವರ ಕಾರಿನ ಫೋಟೊವನ್ನು ಸೆರೆಹಿಡಿದಿದ್ದ ಎಐ ಕ್ಯಾಮೆರಾ, ಸಂಚಾರ ನಿಯಮ ಉಲ್ಲಂಘನೆಯಾಗಿದೆ ಎಂದು ಇ-ಚಲನ್ ಜನರೇಟ್ ಮಾಡಿತ್ತು. ವಾಟ್ಸಾಪ್ಗೆ ಬಂದಿದ್ದ ಸಂದೇಶವನ್ನು ತೆರೆದು ನೋಡಿದ ಮಾಲೀಕರಿಗೆ ಆಘಾತ ಕಾಯ್ದಿತ್ತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದರೂ ‘ಸವಾರ ಹೆಲ್ಮೆಟ್ ಧರಿಸಿಲ್ಲ (No Helmet)’ ಎಂಬ ಕಾರಣ ನೀಡಿ ₹500 ದಂಡ ವಿಧಿಸಲಾಗಿತ್ತು.
ಕಾರು ಚಾಲನೆಗೆ ಹೆಲ್ಮೆಟ್ ನಿಯಮ ಅನ್ವಯಿಸದಿರುವಾಗ ಈ ರೀತಿಯ ದಂಡ ಬಂದಿರುವುದನ್ನು ಕಂಡು ಕಂಗಾಲಾದ ಮಾಲೀಕ ಸುಭಾಷ್, ಈ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದ್ದು, ಎಐ ಕ್ಯಾಮೆರಾದ ತಾಂತ್ರಿಕ ಲೋಪದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.