ರಾಣೇಬೆನ್ನೂರು : ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಿ ಹೊರಬರುತ್ತಿದ್ದ ನಿವೃತ್ತ ಶಿಕ್ಷಕರೊಬ್ಬರ ಎಟಿಎಂ ಕಾರ್ಡ್ ಅನ್ನು ಕೈಚಳಕದಿಂದ ಬದಲಾಯಿಸಿ, ಅವರ ಖಾತೆಯಿಂದ ₹44,754 ಹಣವನ್ನು ವಂಚಿಸಿರುವ ಘಟನೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ‘ಇಂಡಿಯಾ-1’ ಎಟಿಎಂ ಕೇಂದ್ರದಲ್ಲಿ ಜರುಗಿದೆ.
ಈ ಕುರಿತು ಸಂತ್ರಸ್ತ ನಿವೃತ್ತ ಶಿಕ್ಷಕರು ನೀಡಿದ ದೂರಿನನ್ವಯ ರಾಣೇಬೆನ್ನೂರು ನಗರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸರಿತ್ತಿ ಗ್ರಾಮದ ನಿವಾಸಿಯಾಗಿರುವ ನಿವೃತ್ತ ಶಿಕ್ಷಕ ಪುಟ್ಟನಗೌಡ ನಾಗನಗೌಡ ಪಾಟೀಲ (69) ಎಂಬುವರು ಜುಲೈ 24ರಂದು ಮಧ್ಯಾಹ್ನ 2:00 ರಿಂದ 2:30ರ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಇಂಡಿಯಾ-1 ಎಟಿಎಂ ಕೇಂದ್ರಕ್ಕೆ ತೆರಳಿದ್ದರು. ತಮ್ಮ ಎಸ್‌ಬಿಐ (SBI) ಖಾತೆಯ ಎಟಿಎಂ ಕಾರ್ಡ್ ಬಳಸಿ ₹9,927 ಹಣವನ್ನು ಡ್ರಾ ಮಾಡಿಕೊಂಡು ಅವಸರದಲ್ಲಿ ಹೊರಬರುವಾಗ, ಅವರ ಕಾರ್ಡ್ ಕೆಳಗೆ ಬಿದ್ದಿದೆ.
ಆ ವೇಳೆ ಎಟಿಎಂ ಕೇಂದ್ರದಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬ ಕೆಳಗೆ ಬಿದ್ದ ಕಾರ್ಡ್ ತೆಗೆದುಕೊಡುವ ನೆಪದಲ್ಲಿ, ಮೂಲ ಕಾರ್ಡ್ ಬದಲಿಗೆ ಬೇರೆಯವರ ಎಟಿಎಂ ಕಾರ್ಡ್ ನೀಡಿ ವಂಚಿಸಿದ್ದಾನೆ. ತರುವಾಯ, ಆರೋಪಿಯು ನಿವೃತ್ತ ಶಿಕ್ಷಕರ ಮೂಲ ಎಟಿಎಂ ಕಾರ್ಡ್ ಬಳಸಿ ವಿವಿಧ ಎಟಿಎಂಗಳಿಂದ ಒಟ್ಟು ₹44,754 ಹಣವನ್ನು ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾನೆ.
ವಂಚನೆಗೊಳಗಾದ ನಿವೃತ್ತ ಶಿಕ್ಷಕರು ನೀಡಿದ ದೂರಿನ ಆಧಾರದ ಮೇಲೆ, ರಾಣೇಬೆನ್ನೂರು ನಗರ ಶಹರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 207/2026 ರಂತೆ, ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 318(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಸಾರ್ವಜನಿಕರಿಗೆ ಪೊಲೀಸರ ಜಾಗೃತಿ ಸಲಹೆ:
ಅಪರಿಚಿತರ ನೆರವು ಪಡೆಯಬೇಡಿ: ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡುವಾಗ ಯಾವುದೇ ಕಾರಣಕ್ಕೂ ಅಪರಿಚಿತರ ಸಹಾಯ ಪಡೆಯಬಾರದು.
ತಕ್ಷಣ ಪರಿಶೀಲಿಸಿ: ಕಾರ್ಡ್ ಕೈಯಿಂದ ಕೆಳಗೆ ಬಿದ್ದಾಗ ಅಥವಾ ಬೇರೆಯವರು ನೀಡಿದಾಗ ನಿಮ್ಮ ಹೆಸರಿದೆಯೇ ಎಂಬುದನ್ನು ತಕ್ಷಣವೇ ಪರಿಶೀಲಿಸಿಕೊಳ್ಳಿ.
ತ್ವರಿತ ದೂರು ಸಲ್ಲಿಕೆ: ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣವೇ ಬ್ಯಾಂಕ್ ಸಹಾಯವಾಣಿ (Helpline) ಸಂಪರ್ಕಿಸಿ ಕಾರ್ಡ್ ಬ್ಲಾಕ್ ಮಾಡಿ ಹಾಗೂ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.