ಕೊಪ್ಪಳ: 2026ನೇ ಸಾಲಿನ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೆಪ್ಟೆಂಬರ್ 14 ರಿಂದ 20 ರ ನಡುವೆ ನಾಲ್ಕು ದಿನಗಳ ಕಾಲ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಆದೇಶ ಹೊರಡಿಸಿದ್ದಾರೆ.
ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆಧರಿಸಿ, ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಮದ್ಯ ಮಾರಾಟ ನಿಷೇಧದ ದಿನಾಂಕ ಹಾಗೂ ಸಮಯ:
ಕೊಪ್ಪಳ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 14, 16, 18 ಮತ್ತು 20ರಂದು ಪ್ರತಿದಿನ ಬೆಳಿಗ್ಗೆ 6.00 ಗಂಟೆಯಿಂದ ರಾತ್ರಿ 11.00 ಗಂಟೆಯವರೆಗೆ ಮದ್ಯ ಮಾರಾಟ ಸಂಪೂರ್ಣ ಬಂದ್ ಇರಲಿದೆ.
ಉಲ್ಲಂಘಿಸಿದರೆ ಕಠಿಣ ಕ್ರಮ:
ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಆದೇಶ ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.