ಕಡಪ (ಆಂಧ್ರಪ್ರದೇಶ): ಸುಂದರ ಜೀವನದ ಕನಸು ಕಾಣುತ್ತಾ ಮದುವೆಗೆ ಸಜ್ಜಾಗಿದ್ದ ಯುವತಿಯೊಬ್ಬಳು, ಭಾವಿ ಪತಿಯ ಮಾನಸಿಕ ಕಿರುಕುಳ ಹಾಗೂ ಆತನ ಹಾದಿತಪ್ಪಿದ ನಡವಳಿಕೆಯಿಂದಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಉನ್ನತ ಶಿಕ್ಷಣ ಪಡೆದ ಯುವತಿಯೇ ಸಾವಿನ ಹಾದಿ ಹಿಡಿದಿರುವುದು ತೀವ್ರ ವಿಷಾದಕ್ಕೆ ಕಾರಣವಾಗಿದೆ.
ಮೂಲತಃ ಆಂಧ್ರಪ್ರದೇಶದ ಕಡಪ ಜಿಲ್ಲೆಯವರಾದ ರೆಹಾನಾ ಎಂಬ ಯುವತಿ ಎಂ.ಎಸ್ಸಿ (M.Sc) ಪದವೀಧರೆಯಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರು. ಇವರಿಗೂ ಮತ್ತು ಶಹಜಹಾನ್ ಎಂಬ ಯುವಕನಿಗೂ ಇತ್ತೀಚೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿತ್ತು. ಎರಡೂ ಕುಟುಂಬದವರು ಮದುವೆಯ ಸಿದ್ಧತೆಯಲ್ಲಿ ತೊಡಗಿದ್ದರು.
ನಿಶ್ಚಿತಾರ್ಥದ ನಂತರ ರೆಹಾನಾ ಅವರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ಶಹಜಹಾನ್ ತನ್ನ ಅಸಲಿ ಬಣ್ಣ ಬಯಲು ಮಾಡಿದ್ದಾನೆ. “ನೀನು ನನಗೆ ಇಷ್ಟವಿಲ್ಲ, ನಿನ್ನನ್ನು ನೋಡಿದರೆ ನನಗೆ ಯಾವುದೇ ಫೀಲಿಂಗ್ಸ್ ಬರಲ್ಲ. ನನಗೆ ಈಗಾಗಲೇ ನಾಲ್ವರು ಗರ್ಲ್ ಫ್ರೆಂಡ್ಸ್ ಇದ್ದಾರೆ,” ಎಂದು ಹೇಳುವ ಮೂಲಕ ಭಾವಿ ಪತ್ನಿಗೆ ಮಾನಸಿಕವಾಗಿ ಹಿಂಸೆ ನೀಡಲು ಆರಂಭಿಸಿದ್ದಾನೆ. “ನಾನು ಬೇಡ ಎಂದಮೇಲೆ ನಿನಗೆ ಅರ್ಥವಾಗುವುದಿಲ್ಲವೇ?” ಎಂದು ಪದೇ ಪದೇ ಅವಮಾನಿಸಿ ಆಕೆಯನ್ನು ಮಾನಸಿಕವಾಗಿ ಕುಗ್ಗಿಸಿದ್ದಾನೆ.
ಭಾವಿ ಪತಿಯ ಈ ಉಡಾಫೆಯ ಮಾತುಗಳು ಮತ್ತು ನಾಲ್ವರು ಯುವತಿಯರೊಂದಿಗೆ ಅವನಿಗಿರುವ ಸಂಬಂಧದ ವಿಚಾರ ಕೇಳಿ ರೆಹಾನಾ ತೀವ್ರವಾಗಿ ನೊಂದಿದ್ದಾರೆ. ಏಪ್ರಿಲ್ 20ರಂದು ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಯುವ ಮುನ್ನ ಬರೋಬ್ಬರಿ 12 ಪುಟಗಳ ಸುದೀರ್ಘ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತನ್ನ ಮದುವೆ ನಿಶ್ಚಯವಾಗಿದ್ದ ಹುಡುಗ ನೀಡಿದ ಕಿರುಕುಳ ಮತ್ತು ತನ್ನ ನೋವಿನ ಪ್ರತಿ ಅಕ್ಷರವನ್ನೂ ದಾಖಲಿಸಿದ್ದಾರೆ.
ಒಬ್ಬ ಸುಶಿಕ್ಷಿತ ಯುವತಿ ಈ ರೀತಿ ಬಲಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಆಕ್ರೋಶಕ್ಕೆ ಕಾರಣವಾಗಿದೆ. “ನಾಲ್ವರು ಗೆಳತಿಯರಿದ್ದ ಮೇಲೆ ಈತ ಮದುವೆಗೆ ಒಪ್ಪಿದ್ದಾದರೂ ಏಕೆ? ಒಬ್ಬ ಅಮಾಯಕ ಹೆಣ್ಣಿನ ಜೀವನದ ಜೊತೆ ಆಟವಾಡಲು ಈತನಿಗೆ ಅಧಿಕಾರ ಕೊಟ್ಟವರು ಯಾರು?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಶಹಜಹಾನ್ ವಿರುದ್ಧ ಕ್ರಮಕ್ಕೆ ಸಿದ್ಧತೆ ನಡೆಸಿದ್ದಾರೆ. ಸಮಾಜದಲ್ಲಿ ಇಂತಹ ವಿಕೃತ ಮನಸ್ಥಿತಿಯ ಯುವಕರಿಂದಾಗಿ ಮತ್ತೊಬ್ಬ ಹೆಣ್ಣುಮಗಳು ಬಲಿಯಾಗಬಾರದು ಎಂಬ ಕೂಗು ಕೇಳಿಬರುತ್ತಿದೆ.