Police Roundup

ನುಡಿದಂತೆ ನಡೆದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ: ಕೇವಲ 4 ದಿನಗಳಲ್ಲಿ ಹದಗೆಟ್ಟ ರಸ್ತೆಗೆ ಮುಕ್ತಿ!

Share News

ಬೆಳಗಾವಿ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ತಾವು ಮಂಚೂಣಿಯಲ್ಲಿರುವುದನ್ನು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಗೋಟೂರು ರಾಜ್ಯ ರಸ್ತೆಯ ದುಸ್ಥಿತಿಯ ಬಗ್ಗೆ ನೀಡಿದ್ದ ಭರವಸೆಯನ್ನು ಕೇವಲ ನಾಲ್ಕೇ ದಿನಗಳಲ್ಲಿ ಈಡೇರಿಸುವ ಮೂಲಕ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

 

ಗೋಟೂರು ರಾಜ್ಯ ರಸ್ತೆಯು ಬೃಹತ್ ಗಾತ್ರದ ಹೊಂಡಗಳಿಂದ ತುಂಬಿ ಹೋಗಿತ್ತು. ಇದರಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಸಂಚರಿಸಲು ಹರಸಾಹಸ ಪಡುತ್ತಿದ್ದರು. ಅಪಘಾತಗಳ ತಾಣವಾಗಿದ್ದ ಈ ರಸ್ತೆಯನ್ನು ಸರಿಪಡಿಸುವಂತೆ ಇತ್ತೀಚೆಗೆ ಸಾರ್ವಜನಿಕರು ಸಂಸದರಿಗೆ ಮನವಿ ಸಲ್ಲಿಸಿದ್ದರು.

 

ನಾಲ್ಕು ದಿನಗಳ ಹಿಂದೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ರಸ್ತೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಪ್ರಿಯಾಂಕಾ ಜಾರಕಿಹೊಳಿ ಅವರು, “3-4 ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ” ಎಂದು ಮಾತು ನೀಡಿದ್ದರು. ಹೇಳಿದಂತೆಯೇ ಕೂಡಲೇ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಕಾಮಗಾರಿ ಆರಂಭಿಸುವಂತೆ ಚುರುಕು ಮುಟ್ಟಿಸಿದ್ದರು. ಇದರ ಫಲವಾಗಿ ಇಂದು ಅಧಿಕೃತವಾಗಿ ರಸ್ತೆ ದುರಸ್ತಿ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.

 

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಸಂಸದರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅವರು ಆದೇಶಿಸಿದ್ದಾರೆ.

​ಸಂಸದರ ಈ ಕ್ಷಿಪ್ರ ಕ್ರಮಕ್ಕೆ ಗೋಟೂರು ಗ್ರಾಮಸ್ಥರು ಹಾಗೂ ಚಿಕ್ಕೋಡಿ ಕ್ಷೇತ್ರದ ಜನತೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಅಭಿವೃದ್ಧಿಪರ ನಾಯಕತ್ವ ಎಂದರೆ ಹೀಗಿರಬೇಕು” ಎಂದು ಶ್ಲಾಘಿಸಿದ್ದಾರೆ.


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin