ಬೆಂಗಳೂರು: ಸಿ.ವಿ. ರಾಮನ್ ನಗರದ ಅಯ್ಯನರೆಡ್ಡಿ ಪಾಳ್ಯದಲ್ಲಿರುವ ದೇವಸ್ಥಾನವೊಂದರಲ್ಲಿ ತಡರಾತ್ರಿ ಭೀಕರ ಕಳ್ಳತನ ನಡೆದಿದ್ದು, ದೇವರ ಮುಂದಿದ್ದ ತ್ರಿಶೂಲದಿಂದಲೇ ಹುಂಡಿ ಒಡೆದು ನಗದು ದೋಚಿರುವ ಕರುಣಾಜನಕ ಘಟನೆ ಬೆಳಕಿಗೆ ಬಂದಿದೆ. ಕಳ್ಳ ದೇವಸ್ಥಾನದೊಳಗೆ ನುಗ್ಗಿ ಕೃತ್ಯ ಎಸಗಿರುವ ಸಂಪೂರ್ಣ ದೃಶ್ಯಾವಳಿಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಮೇ 13ರ ಮುಂಜಾನೆ ಸುಮಾರು 2 ಗಂಟೆಯ ಜಾವದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ದೇವಸ್ಥಾನಕ್ಕೆ ಒಂಟಿಯಾಗಿ ಎಂಟ್ರಿ ಕೊಟ್ಟ ಕಳ್ಳ, ಮೊದಲಿಗೆ ಹುಂಡಿಯ ಬೀಗ ಒಡೆಯಲು ಹರಸಾಹಸ ಪಟ್ಟಿದ್ದಾನೆ. ಎಷ್ಟು ಪ್ರಯತ್ನಿಸಿದರೂ ಹುಂಡಿ ಒಡೆಯಲು ಸಾಧ್ಯವಾಗದಿದ್ದಾಗ, ಗರ್ಭಗುಡಿಯ ಮುಂಭಾಗದಲ್ಲಿದ್ದ ದೇವರ ಪವಿತ್ರ ತ್ರಿಶೂಲವನ್ನೇ ಕಿತ್ತಿದ್ದಾನೆ. ಆ ತ್ರಿಶೂಲದ ಸಹಾಯದಿಂದ ಹುಂಡಿಯನ್ನು ಬಲವಂತವಾಗಿ ಒಡೆದು, ಅದರಲ್ಲಿದ್ದ ಇಡೀ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾನೆ.
ಬೆಳಗ್ಗೆ ಅರ್ಚಕರು ದೇವಸ್ಥಾನವನ್ನು ತೆರೆದು ಪೂಜಾ ಕಾರ್ಯ ನೆರವೇರಿಸಲು ಬಂದಾಗ ಹುಂಡಿ ಒಡೆದಿರುವುದು ಹಾಗೂ ಕಳ್ಳತನ ನಡೆದಿರುವುದು ತಕ್ಷಣವೇ ಬೆಳಕಿಗೆ ಬಂದಿದೆ. ದೇವಸ್ಥಾನದ ಒಳಭಾಗದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳ್ಳನ ಕರಾಮತು ಸಂಪೂರ್ಣವಾಗಿ ಪತ್ತೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ದೇವಸ್ಥಾನದ ಮಂಡಳಿಯ ಟ್ರಸ್ಟಿಗಳು ತಕ್ಷಣವೇ ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ಆಧಾರದ ಮೇಲೆ ಕಳ್ಳನ ಪತ್ತೆಗಾಗಿ ತೀವ್ರ ಜಾಲ ಬೀಸಿದ್ದಾರೆ.