Police Roundup

ಸಿಲಿಕಾನ್ ಸಿಟಿಯಲ್ಲಿ ಜಾನ್ಸ್ ಅಸೆಟ್ ಮ್ಯಾನೇಜ್‌ಮೆಂಟ್ ಭಾರಿ ವಂಚನೆ: ಮನೆ ಲೀಸ್ ನೆಪದಲ್ಲಿ ₹200 ಕೋಟಿ ಲೂಟಿ ಮಾಡಿ ಮಾಲೀಕ ಎಸ್ಕೇಪ್!

Share News

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮನೆ ಲೀಸ್ ಹಾಗೂ ಬಾಡಿಗೆ ಹೆಸರಿನಲ್ಲಿ ಬರೋಬ್ಬರಿ 200 ಕೋಟಿ ರೂಪಾಯಿ ವಂಚಿಸಿ ಸಾರ್ವಜನಿಕರಿಗೆ ನಾಮ ಹಾಕಿದ್ದ ‘ಜಾನ್ಸ್ ಅಸೆಟ್ ಮ್ಯಾನೇಜ್‌ಮೆಂಟ್‌’ (John’s Asset Management) ಕಂಪನಿಯ ಮಾಲೀಕ ಸ್ಟೀಫನ್ ಜಾನ್ ಕೋಟ್ಯಂತರ ರೂಪಾಯಿ ಹಣದೊಂದಿಗೆ ಪರಾರಿಯಾಗಿದ್ದಾನೆ. ಸದ್ಯ ವಂಚನೆಗೊಳಗಾದ ಗ್ರಾಹಕರು ನೀಡಿದ ದೂರಿನನ್ವಯ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ತೀವ್ರ ಜಾಲ ಬೀಸಿದ್ದಾರೆ.

 

ಬೆಂಗಳೂರಿನಲ್ಲಿ ಮನೆಗಳಿಗಿರುವ ಅತಿಯಾದ ಬೇಡಿಕೆಯನ್ನೇ ಬಂಡವಾಳ ಮಾಡಿಕೊಂಡಿದ್ದ ಈ ವಂಚಕ ಕಂಪನಿ, ಜನರನ್ನು ಸೆಳೆಯಲು ಆಕರ್ಷಕ ಆಫರ್ ಒಂದನ್ನು ಮುಂದಿಟ್ಟಿತ್ತು. ಗ್ರಾಹಕರಿಂದ ದೊಡ್ಡ ಮೊತ್ತದ ಲೀಸ್ ಹಣವನ್ನು ಮುಂಗಡವಾಗಿ ಪಡೆದು, “ನಾವು ನಿಮಗೆ ಉತ್ತಮ ಮನೆ ಹುಡುಕಿ ಕೊಡುತ್ತೇವೆ ಹಾಗೂ ಆ ಮನೆಯ ಮಾಸಿಕ ಬಾಡಿಗೆಯನ್ನು ನಾವೇ ಪಾವತಿಸುತ್ತೇವೆ” ಎಂದು ಪಕ್ಕಾ ಪ್ಲಾನ್ ಮುಖಾಂತರ ನಂಬಿಸುತ್ತಿತ್ತು.

​ಇದನ್ನು ನಂಬಿದ ನೂರಾರು ಮುಗ್ಧ ಸಾರ್ವಜನಿಕರು ತಲಾ 10 ಲಕ್ಷ ರೂಪಾಯಿಯಿಂದ ಹಿಡಿದು ಬರೋಬ್ಬರಿ 75 ಲಕ್ಷ ರೂಪಾಯಿವರೆಗೂ ಈ ಕಂಪನಿಗೆ ಹಣ ಹೂಡಿಕೆ ಮಾಡಿದ್ದರು.

 

ಆರಂಭದ ಕೆಲವು ತಿಂಗಳುಗಳು ಗ್ರಾಹಕರಿಗೆ ನಂಬಿಕೆ ಹುಟ್ಟಿಸಲು ಕಂಪನಿಯು ಸರಿಯಾಗಿ ಮನೆ ಮಾಲೀಕರಿಗೆ ಬಾಡಿಗೆ ಪಾವತಿಸುತ್ತಿತ್ತು. ಆದರೆ, ದಿನಕಳೆದಂತೆ ಬಾಡಿಗೆ ಕಟ್ಟುವುದನ್ನು ನಿಲ್ಲಿಸಿ ಮಾಲೀಕ ಕೈ ಎತ್ತಿದ್ದಾನೆ. ಹೊಸ ಗ್ರಾಹಕರಿಂದ ಬರುತ್ತಿದ್ದ ಹಣವನ್ನು ಹಳೆಯ ಗ್ರಾಹಕರ ಬಾಡಿಗೆಗೆ ಬಳಸುತ್ತಾ ಈತ ‘ಪೋಂಜಿ ಸ್ಕೀಮ್’ (Ponzi Scheme) ಮಾದರಿಯಲ್ಲಿ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.

 

​ಯಾವಾಗ ಬಾಡಿಗೆ ಹಣ ಬರುವುದು ನಿಂತಿತೋ, ಆವಾಗ ಅಸಲಿ ಮನೆ ಮಾಲೀಕರು ಮನೆ ಖಾಲಿ ಮಾಡುವಂತೆ ಗ್ರಾಹಕರಿಗೆ ಒತ್ತಾಯಿಸತೊಡಗಿದ್ದಾರೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಬಾಡಿಗೆದಾರರು ಇತ್ತ ಹಣವೂ ಇಲ್ಲದೆ, ಅತ್ತ ಇರಲು ಮನೆಯೂ ಇಲ್ಲದೆ ಬೀದಿಗೆ ಬೀಳುವಂತಾಗಿದೆ. ಹೂಡಿಕೆ ಮಾಡಿದ ಹಣವನ್ನು ವಾಪಸ್ ಕೇಳಲು ಹೋದವರಿಗೆ “ತಿಂಗಳಿಗೆ ಶೇ. 4 ರಷ್ಟು ಬಡ್ಡಿ ನೀಡಲಾಗುವುದು” ಎಂದು ನಂಬಿಸಿ ಮತ್ತೆ ವಂಚಿಸಲಾಗಿದೆ.

 

ಗಮನಾರ್ಹ ಸಂಗತಿಯೆಂದರೆ, ಕೋಟಿ ಕೋಟಿ ಲೂಟಿ ಮಾಡಿ ಎಸ್ಕೇಪ್ ಆಗಿರುವ ಈ ಕಿಲಾಡಿ ಅಸಾಮಿ ಸ್ಟೀಫನ್ ಜಾನ್, ಇದೇ ರೀತಿಯ ವಂಚನೆ ಪ್ರಕರಣದಲ್ಲಿ ಈ ಹಿಂದೆ ಸಿಸಿಬಿ (CCB) ಪೊಲೀಸರಿಂದಲೂ ಬಂಧನಕ್ಕೊಳಗಾಗಿದ್ದ ಎನ್ನಲಾಗಿದೆ. ಜೈಲಿನಿಂದ ಹೊರಬಂದರೂ ತನ್ನ ಹಳೇ ಚಾಳಿಯನ್ನು ಮುಂದುವರಿಸಿ, ಈಗ ಮತ್ತೆ ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿದ್ದಾನೆ.

 

ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆ ಲೀಸ್ ಅಥವಾ ಬಾಡಿಗೆಗೆ ಪಡೆಯುವ ಮುನ್ನ ಮಧ್ಯವರ್ತಿ ಕಂಪನಿಗಳ ಬಗ್ಗೆ ಸಾರ್ವಜನಿಕರು ಅತಿ ಹೆಚ್ಚು ಜಾಗರೂಕರಾಗಿರಬೇಕು. ‘ಕಡಿಮೆ ಹಣಕ್ಕೆ ಅತಿ ಹೆಚ್ಚು ಲಾಭ’ ಅಥವಾ ‘ಉಚಿತ ಬಾಡಿಗೆ’ಯಂತಹ ಆಮಿಷ ಒಡ್ಡುವ ಇಂತಹ ಆಫರ್‌ಗಳ ಹಿಂದೆ ಬಿದ್ದು ಗಾಳಕ್ಕೆ ಸಿಲುಕಬೇಡಿ. ನಿಮ್ಮ ಸುತ್ತಮುತ್ತ ಇಂತಹ ಅನುಮಾನಾಸ್ಪದ ವ್ಯವಹಾರಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ” ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin