ಬೆಂಗಳೂರು: ನಿಯಂತ್ರಣ ತಪ್ಪಿದ ಬಿಎಂಟಿಸಿ ಬಸ್ಸೊಂದು ದೇವಸ್ಥಾನದ ಆವರಣಕ್ಕೆ ನುಗ್ಗಿದ ಘಟನೆ ಇಂದು ಮಧ್ಯಾಹ್ನ ಹೇರೋಹಳ್ಳಿ ಕ್ರಾಸ್ ಸಮೀಪ ನಡೆದಿದೆ. ಬಸ್ ಗುದ್ದಿದ ರಭಸಕ್ಕೆ ದೇವಸ್ಥಾನದ ತಡೆಗೋಡೆ ಹಾಗೂ ಗ್ರಿಲ್ ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನೆಲಮಂಗಲದ 8ನೇ ಮೈಲಿಯಿಂದ ಹೇರೋಹಳ್ಳಿ ಕ್ರಾಸ್‌ಗೆ ತೆರಳುತ್ತಿದ್ದ ಬಿಎಂಟಿಸಿ ಘಟಕ-9ಕ್ಕೆ ಸೇರಿದ ಬಸ್ (KA 53 F 0137) ಇಂದು ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಬೃಂದಾವನ ಬಸ್ ಸ್ಟಾಪ್ ಸಮೀಪ ಬರುತ್ತಿತ್ತು. ಈ ವೇಳೆ ಬಸ್ಸಿನ ಮುಂಭಾಗದಲ್ಲಿ ಏಕಾಏಕಿ ಬೈಕ್ ಸವಾರನೊಬ್ಬ ಅಡ್ಡ ಬಂದಿದ್ದಾನೆ ಎನ್ನಲಾಗಿದೆ.
ವೇಗವಾಗಿ ಬರುತ್ತಿದ್ದ ಬಸ್ ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಶಿವನ ದೇವಸ್ಥಾನದ ಆವರಣಕ್ಕೆ ನುಗ್ಗಿದೆ. ಡಿಕ್ಕಿಯ ತೀವ್ರತೆಗೆ ದೇವಸ್ಥಾನದ ಮುಂಭಾಗದ ಕಬ್ಬಿಣದ ಗ್ರಿಲ್ ಹಾಗೂ ತಡೆಗೋಡೆ ಕುಸಿದು ಬಿದ್ದಿದೆ.
ಅಪಘಾತ ನಡೆದ ಸಮಯದಲ್ಲಿ ದೇವಸ್ಥಾನದ ಆವರಣದಲ್ಲಿ ಹಾಗೂ ಬಸ್ ನಿಲ್ದಾಣದ ಬಳಿ ಜನಸಂದಣಿ ಕಡಿಮೆ ಇದ್ದಿದ್ದರಿಂದ ಭಾರಿ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ. ಘಟನೆಯಿಂದಾಗಿ ಬಸ್ಸಿನ ಮುಂಭಾಗಕ್ಕೂ ಹಾನಿಯಾಗಿದ್ದು, ಪ್ರಯಾಣಿಕರು ಲಘು ಗಾಯಗಳೊಂದಿಗೆ ಪಾರಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಸ್ಸನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆದಿದೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಾಹಿತಿ ದಾಖಲಾಗಿದೆ.