ಚಿಕ್ಕಬಳ್ಳಾಪುರ: ಜಿಲ್ಲೆಯ ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ ನಡೆಸಿ ಪೊಲೀಸರಿಗೆ ತಲೆನೋವಾಗಿದ್ದ ಇಬ್ಬರು ಕುಖ್ಯಾತ ಮನೆಗಳ್ಳರನ್ನು ಬಂಧಿಸುವಲ್ಲಿ ವಿಶೇಷ ತಂಡ ಯಶಸ್ವಿಯಾಗಿದೆ. ಬಂಧಿತರಿಂದ ಭಾರಿ ಪ್ರಮಾಣದ ಕಳುವು ಮಾಡಲಾಗಿದ್ದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊ.ಸಂ. 204/2025 ಪ್ರಕರಣ ಸೇರಿದಂತೆ, ಹಲವಾರು ಮನೆಗಳ್ಳತನ ಪ್ರಕರಣಗಳನ್ನು ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ತಂಡವು ತಾಂತ್ರಿಕ ಸಾಕ್ಷ್ಯ ಹಾಗೂ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಅರೆಸ್ಟ್ ಮಾಡಿದೆ.
ಬಂಧಿತ ಆರೋಪಿಗಳು ಹಲವು ದಿನಗಳಿಂದ ಜಿಲ್ಲೆಯ ವಿವಿಧೆಡೆ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು. ತನಿಖೆಯ ವೇಳೆ ಇವರು ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ ವಶಪಡಿಸಿಕೊಂಡ ಮಾಲನ್ನು ಕಾನೂನು ಪ್ರಕ್ರಿಯೆಯ ನಂತರ ವಾರಸುದಾರರಿಗೆ ಒಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ.
ಜಟಿಲವಾಗಿದ್ದ ಕಳ್ಳತನ ಪ್ರಕರಣವನ್ನು ಅಲ್ಪ ಅವಧಿಯಲ್ಲಿ ಭೇದಿಸಿ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೆರೇಸಂದ್ರ ಪೊಲೀಸ್ ಠಾಣೆಯ ವಿಶೇಷ ತಂಡದ ಕಾರ್ಯವೈಖರಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ. ತಂಡದ ಉತ್ತಮ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.
ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇವರಿಂದ ಇನ್ನಷ್ಟು ಕಳ್ಳತನ ಪ್ರಕರಣಗಳ ಮಾಹಿತಿ ಹೊರಬರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.