ದೇಶವನ್ನೇ ಬೆಚ್ಚಿಬೀಳಿಸಿದ್ದ ಆರು ಜನರ ಭೀಕರ ಹತ್ಯಾಕಾಂಡ ಪ್ರಕರಣದಲ್ಲಿ ಈಗ ಮತ್ತೊಂದು ಆಘಾತಕಾರಿ ಹಾಗೂ ರೋಮಾಂಚನಕಾರಿ ಸತ್ಯ ಬಯಲಾಗಿದೆ. ಪ್ರಕರಣದ ಮುಖ್ಯ ಆರೋಪಿ ರಾಜಕುಮಾರ್, ತನ್ನ ವಿರುದ್ಧ ದಾಖಲಾಗಿದ್ದ ಪೋಕ್ಸೋ (POCSO) ಪ್ರಕರಣದಿಂದ ಪಾರಾಗಲು ಬರೋಬ್ಬರಿ 20 ಲಕ್ಷ ರೂಪಾಯಿ ಲಂಚದ ಡೀಲ್ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿ ರಾಜಕುಮಾರ್‌ನಿಂದ ಭಾರಿ ಪ್ರಮಾಣದ ಹಣ ಕೈಬದಲಾದ ಹಿನ್ನೆಲೆಯಲ್ಲಿ, ಅಂದಿನ ತನಿಖಾಧಿಕಾರಿಗಳು ಆತನಿಗೆ ಕಾನೂನಿನ ರಕ್ಷಣೆ ನೀಡಲು ಮುಂದಾಗಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಠಿಣವಾದ ಪೋಕ್ಸೋ ಸೆಕ್ಷನ್‌ಗಳನ್ನು ದಾಖಲಿಸುವ ಬದಲಿಗೆ, ಆರೋಪಿಗೆ ಸುಲಭವಾಗಿ ಠಾಣೆಯಲ್ಲೇ ಜಾಮೀನು (Station Bail) ಸಿಗುವಂತಹ ದುರ್ಬಲ ಸೆಕ್ಷನ್‌ಗಳನ್ನು ಹಾಕಿ ಪೊಲೀಸರು ಉಡುಗೊರೆ ನೀಡಿದ್ದರು ಎನ್ನಲಾಗಿದೆ.
ಲಂಚದ ಆಸೆಗೆ ಬಿದ್ದ ಪೊಲೀಸರು ಸಂತ್ರಸ್ತ ಕುಟುಂಬಕ್ಕೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದರು. “ಆರೋಪಿ ರಾಜಕುಮಾರ್ ತಮಗೆ ನಿರಂತರವಾಗಿ ಜೀವ ಬೆದರಿಕೆ ಹಾಕುತ್ತಿದ್ದಾನೆ, ನಮಗೆ ಪ್ರಾಣಭಯವಿದೆ” ಎಂದು ಸಂತ್ರಸ್ತ ಬಾಲಕಿಯ ಕುಟುಂಬಸ್ಥರು ಪದೇ ಪದೇ ದೂರು ನೀಡಿದ್ದರೂ, ಪೊಲೀಸರು ಅದನ್ನು ಕಸದ ಬುಟ್ಟಿಗೆ ಎಸೆದಿದ್ದರು. ಪೊಲೀಸರ ಇದೇ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯವೇ ಅಂತಿಮವಾಗಿ ಆರು ಅಮಾಯಕ ಜೀವಗಳ ಭೀಕರ ಹತ್ಯಾಕಾಂಡಕ್ಕೆ ನೇರ ಕಾರಣವಾಯಿತು ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಭ್ರಷ್ಟಾಚಾರದ ನಡೆ ಇಡೀ ಇಲಾಖೆಗೆ ತೀವ್ರ ಮುಖಭಂಗ ಉಂಟುಮಾಡಿದ ಬೆನ್ನಲ್ಲೇ, ಉನ್ನತ ಪೊಲೀಸ್ ಅಧಿಕಾರಿಗಳು ಆಂತರಿಕ ತನಿಖೆಗೆ ಆದೇಶಿಸಿದ್ದರು. ಪ್ರಾಥಮಿಕ ತನಿಖೆಯಲ್ಲೇ ಕರ್ತವ್ಯ ಲೋಪ ಮತ್ತು ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ.
ಪ್ರಕರಣದಲ್ಲಿ ಮೊದಲೇ ನಿರ್ಲಕ್ಷ್ಯ ವಹಿಸಿದ್ದ ಎಸ್‌ಐ (SI) ರಮೇಶ್ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿತ್ತು.
ಇದೀಗ ಇಲಾಖೆಯ ಘನತೆಗೆ ಧಕ್ಕೆ ತಂದ ಹಾಗೂ ನಿರ್ಲಕ್ಷ್ಯದ ಆರೋಪದ ಹಿನ್ನೆಲೆಯಲ್ಲಿ ಸಿಐ (CI) ಕ್ರಾಂತಿ ರೆಡ್ಡಿ ಅವರನ್ನು ಸಹ ಅಮಾನತುಗೊಳಿಸಿ ಸಿಪಿ (CP) ತರುಣ್ ಜೋಷಿ ಅವರು ಕಡಕ್ ಆದೇಶ ಹೊರಡಿಸಿದ್ದಾರೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಇಲಾಖೆಯ ಈ ಕ್ರಮ ಸಾರ್ವಜನಿಕ ವಲಯದಲ್ಲಿ ತಕ್ಕ ಮಟ್ಟಿನ ಸಮಾಧಾನ ತಂದಿದೆ.