ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಒಂದೇ ಸ್ಕೂಟರ್‌ನಲ್ಲಿ ಆರು ಮಂದಿ ಅಪ್ರಾಪ್ತ ಬಾಲಕರು ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ದೃಶ್ಯದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಪಾದರಾಯನಪುರ ಮುಖ್ಯರಸ್ತೆಯ ಗೌರಿಪಾಳ್ಯ ಬಳಿ ಇರುವ ಆಟೋ ಗ್ಯಾಸ್ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಏಪ್ರಿಲ್ 26ರಂದು ಬೆಳಿಗ್ಗೆ ಸುಮಾರು 10:45ರ ವೇಳೆಗೆ KA05-JZ-9065 ನೋಂದಣಿ ಸಂಖ್ಯೆಯ ಸ್ಕೂಟರ್‌ನಲ್ಲಿ ಆರು ಮಂದಿ ಅಪ್ರಾಪ್ತರು ಸವಾರಿ ಮಾಡಿದ್ದಾರೆ. ಇವರಲ್ಲಿ ಯಾರೊಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ ಹಾಗೂ ವಾಹನದ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕುಳಿತು ಸಂಚರಿಸುತ್ತಿದ್ದರು.
ಅಪ್ರಾಪ್ತರು ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡುತ್ತಿದ್ದದ್ದನ್ನು ಕಂಡ ಬೈಕ್ ಸವಾರರೊಬ್ಬರು ಫೋಟೋ ಕ್ಲಿಕ್ಕಿಸಿ ಎಕ್ಸ್ (X) ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ, ಬೆಂಗಳೂರು ಸಂಚಾರಿ ಪೊಲೀಸರ ಗಮನ ಸೆಳೆದಿರುವ ನೆಟ್ಟಿಗರು, ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ವಾಹನ ಚಾಲನೆ ಮಾಡಲು ಪರವಾನಗಿ ಇಲ್ಲದ ಹಾಗೂ ಪ್ರಾಯದ ಅರಿವಿಲ್ಲದ ಅಪ್ರಾಪ್ತ ಮಕ್ಕಳಿಗೆ ಸ್ಕೂಟರ್ ನೀಡಿರುವ ಪೋಷಕರ ವಿರುದ್ಧ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪೋಷಕರ ಇಂತಹ ನಿರ್ಲಕ್ಷ್ಯವೇ ದೊಡ್ಡ ಅವಘಡಗಳಿಗೆ ಕಾರಣವಾಗುತ್ತದೆ” ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಸದ್ಯ ಈ ಕುರಿತು ಸಂಚಾರಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ವಾಹನದ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಮಾಲೀಕರಿಗೆ ದಂಡ ವಿಧಿಸುವ ಹಾಗೂ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.