ದಾವಣಗೆರೆ: ಮದುವೆಯಾಗಿ ಕೇವಲ ಎರಡು ವರ್ಷ ಕಳೆಯುವಷ್ಟರಲ್ಲೇ ಗೃಹಿಣಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಗರದ ಅಂಚೆ ಇಲಾಖೆ ವಸತಿಗೃಹದಲ್ಲಿ ನಡೆದಿದೆ. ಮೃತಳನ್ನು ಮಂಡಲೂರು ಗ್ರಾಮದ ಕಾವ್ಯ (26) ಎಂದು ಗುರುತಿಸಲಾಗಿದ್ದು, ಈ ಸಾವಿನ ಹಿಂದೆ ಪತಿಯ ಕೈವಾಡವಿದೆ ಎಂದು ಕಾವ್ಯ ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.
ಮಂಡಲೂರು ಗ್ರಾಮದ ಕಾವ್ಯ ಅವರ ವಿವಾಹವು ಹೊದಿಗೆರೆ ನಿವಾಸಿ ಮನು ಎಂಬುವವರ ಜೊತೆ 2024ರ ಮೇ ತಿಂಗಳಲ್ಲಿ ಅದ್ಧೂರಿಯಾಗಿ ನಡೆದಿತ್ತು. ದಾಂಪತ್ಯ ಜೀವನ ಸುಸೂತ್ರವಾಗಿ ಸಾಗುತ್ತಿದ್ದ ನಡುವೆಯೇ, ಮನು ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದು ದಂಪತಿಗಳ ನಡುವೆ ಕಲಹಕ್ಕೆ ಕಾರಣವಾಗಿತ್ತು.
ಮೃತ ಕಾವ್ಯ ತನ್ನ ಪತಿಯ ಅಕ್ರಮ ಸಂಬಂಧದ ಬಗ್ಗೆ ಪಕ್ಕಾ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು ಎನ್ನಲಾಗಿದೆ. ಪತಿ ಅನ್ಯ ಯುವತಿಯೊಂದಿಗೆ ಚಾಟ್ ಮಾಡಿದ್ದ ಸ್ಕ್ರೀನ್‌ಶಾಟ್‌ಗಳು ಹಾಗೂ ಇತರೆ ದಾಖಲೆಗಳನ್ನು ಸಂಗ್ರಹಿಸಿ ಪೆನ್‌ಡ್ರೈವ್‌ನಲ್ಲಿ ಇಟ್ಟಿದ್ದರು. ಈ ಪೆನ್‌ಡ್ರೈವ್ ಅನ್ನು ತವರು ಮನೆಯಲ್ಲಿ ತನ್ನ ಸಹೋದರನ ಬ್ಯಾಗ್‌ನಲ್ಲಿ ಗುಟ್ಟಾಗಿ ಇಟ್ಟಿದ್ದರು ಎಂದು ಪೋಷಕರು ತಿಳಿಸಿದ್ದಾರೆ.
ಪತಿ ಮನು ತವರು ಮನೆಯಿಂದ ಹಣ ತರುವಂತೆ ಕಾವ್ಯಾಗೆ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ. ತನ್ನ ಅಕ್ರಮ ಸಂಬಂಧದ ವಿಚಾರ ಹೊರಬರುತ್ತದೆ ಎಂಬ ಭಯದಿಂದ ಮನು ಕಾವ್ಯಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಮೃತಳ ಸಂಬಂಧಿಕರು ದೂರಿನಲ್ಲಿ ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮನುವನ್ನು ವಶಕ್ಕೆ ಪಡೆದು ತನಿಖೆ ಕೈಗೆತ್ತಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿಯಬೇಕಿದೆ.
