ಹಾವೇರಿ: ಮೊಬೈಲ್ ಕ್ಯಾಂಟೀನ್ ಯೋಜನೆ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕ (ಕನ್ಸಲ್ಟೆಂಟ್) ಮಲಕ್ ಸಾಬ್ ನದಾಪ್ ಎಂಬಾತ ಲೋಕಾಯುಕ್ತ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ರವಿಚಂದ್ರ ನಿಂಗಪ್ಪ ಮೈದೂರು ಎಂಬುವರು ಪ್ರವಾಸೋದ್ಯಮ ಇಲಾಖೆಯ ಮೊಬೈಲ್ ಕ್ಯಾಂಟೀನ್ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ಯೋಜನೆಯಡಿ ಸೌಲಭ್ಯ ಮಂಜೂರು ಮಾಡಿಕೊಡಲು ಅಧಿಕಾರಿ ಮಲಕ್ ಸಾಬ್ ೨೦,೦೦೦ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನು.
ಲಂಚ ನೀಡಲು ಇಚ್ಛಿಸದ ರವಿಚಂದ್ರ ಅವರು ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ದೂರುದಾರರಿಂದ ೨೦ ಸಾವಿರ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆಯಲ್ಲೇ ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಲಂಚದ ಹಣವನ್ನು ಜಪ್ತಿ ಮಾಡಿಕೊಂಡಿರುವ ಲೋಕಾಯುಕ್ತ ಸಿಬ್ಬಂದಿ, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.