Police Roundup

ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ಅಮಾನತು ಆದೇಶ ರದ್ದು: ಹೊಸ ಹುದ್ದೆ ನೀಡಿ ಸರ್ಕಾರದ ಆದೇಶ

Share News

ಬೆಂಗಳೂರು: ಮಹಿಳೆಯರೊಂದಿಗಿನ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರರಾವ್ ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ರದ್ದುಗೊಳಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಹೊಸ ಹುದ್ದೆಗೆ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

 

ಆಲ್ ಇಂಡಿಯಾ ಸರ್ವಿಸ್ (AIS) ನಿಯಮಗಳಡಿ ರಾಮಚಂದ್ರರಾವ್ ಅವರ ಅಮಾನತನ್ನು ಹಿಂಪಡೆದಿರುವ ಸರ್ಕಾರ, ಅವರಿಗಾಗಿಯೇ ‘ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಮ್ಯಾನುಯೆಲ್)’ ಎಂಬ ಹೊಸ ಹುದ್ದೆಯನ್ನು ಸೃಷ್ಟಿಸಿ ಅಲ್ಲಿಗೆ ನೇಮಕ ಮಾಡಿದೆ.

 

ತಮ್ಮ ಕಚೇರಿಯಲ್ಲೇ ಮಹಿಳೆಯರೊಂದಿಗೆ ಲೈಂಗಿಕ ನಡವಳಿಕೆ ಹಾಗೂ ಅನುಚಿತ ವರ್ತನೆ ತೋರಿದ್ದಾರೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ಜನವರಿ 19 ರಂದು ಸರ್ಕಾರ ಅವರನ್ನು ಸೇವೆಯಿಂದ ಅಮಾನತುಗೊಳಿಸಿತ್ತು. ಈ ಹಗರಣದ ಕುರಿತು ತನಿಖೆ ನಡೆಸಲು ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯು ತನ್ನ ವರದಿಯಲ್ಲಿ ವಿಡಿಯೋಗಳು ‘ಅಸಲಿ’ ಎಂದು ದೃಢಪಡಿಸಿತ್ತು.

 

ವಿಡಿಯೋ ಅಸಲಿ ಎಂದು ವರದಿ ಬಂದಿದ್ದರೂ, ಅವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಐದು ತಿಂಗಳ ಬಳಿಕ ಅಮಾನತು ಆದೇಶ ರದ್ದು ಮಾಡಿರುವುದು ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಡಾ. ಕೆ. ರಾಮಚಂದ್ರರಾವ್ ಅವರು ಇದೇ ತಿಂಗಳ ಅಂತ್ಯಕ್ಕೆ ಸೇವೆಯಿಂದ ನಿವೃತ್ತರಾಗಲಿದ್ದು, ನಿವೃತ್ತಿಗೂ ಕೆಲವೇ ದಿನಗಳ ಮುನ್ನ ಸರ್ಕಾರ ನೀಡಿರುವ ಈ ‘ರಿಲೀಫ್’ ಕುತೂಹಲ ಮೂಡಿಸಿದೆ.

​ವಿಡಿಯೋ ವರದಿ ಆಧರಿಸಿ ಮುಂದಿನ ವಿಚಾರಣೆ ನಡೆಸುವ ಬಗ್ಗೆ ಚಿಂತಿಸಿದ್ದ ಸರ್ಕಾರ, ಅಂತಿಮವಾಗಿ ಅಮಾನತು ರದ್ದುಗೊಳಿಸಿ ಹೊಸ ಜವಾಬ್ದಾರಿ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin