Police Roundup

ಕೋಲ್ಕತ್ತಾ: ಪ್ರಧಾನಿ ಭೇಟಿಯಿಂದ ರಾತ್ರೋರಾತ್ರಿ ‘ಸೆಲೆಬ್ರಿಟಿ’ಯಾದ ಚುರುಮುರಿ ವ್ಯಾಪಾರಿ ವಿಕ್ರಮ್!

Share News

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಚುನಾವಣಾ ಕಣದಲ್ಲಿ ರಾಜಕೀಯ ಜಿದ್ದಾಜಿದ್ದಿನ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಸರಳ ನಡೆ ಈಗ ದೇಶಾದ್ಯಂತ ಸುದ್ದಿಯಾಗಿದೆ. ರಸ್ತೆ ಬದಿಯ ಚುರುಮುರಿ ವ್ಯಾಪಾರಿಯೊಬ್ಬರ ಅನಿರೀಕ್ಷಿತ ಭೇಟಿ ಮತ್ತು ಹತ್ತು ನಿಮಿಷಗಳ ಕಾಲ ನಡೆದ ಅವರ ಆತ್ಮೀಯ ಸಂವಾದ ವಿಕ್ರಮ್ ಎಂಬ ಸಾಮಾನ್ಯ ವ್ಯಕ್ತಿಯನ್ನು ರಾತ್ರೋರಾತ್ರಿ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರಬಿಂದುವಾಗಿಸಿದೆ.

 

ಮೂಲತಃ ಬಿಹಾರದವರಾದ ವಿಕ್ರಮ್, ಕೋಲ್ಕತ್ತಾದಲ್ಲಿ ಸಣ್ಣ ಚುರುಮುರಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ಶ್ರಮಜೀವಿ. ಬಡತನದ ಕಾರಣಕ್ಕೆ ಕೇವಲ 9ನೇ ತರಗತಿಯವರೆಗೆ ಮಾತ್ರ ಓದಿರುವ ವಿಕ್ರಮ್, ದಿನಕ್ಕೆ ಸುಮಾರು ಸಾವಿರ ರೂಪಾಯಿ ಸಂಪಾದಿಸಿ ತಮ್ಮ ತಂದೆ-ತಾಯಿಯನ್ನು ಸಲಹುತ್ತಿದ್ದಾರೆ. ಎಂದಿನಂತೆ ವ್ಯಾಪಾರದಲ್ಲಿ ತೊಡಗಿದ್ದ ವಿಕ್ರಮ್ ಅವರಿಗೆ ಪ್ರಧಾನಿಯೇ ಅತಿಥಿಯಾಗಿ ಬರುತ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ.

 

ತಮ್ಮ ಅಂಗಡಿಗೆ ಪ್ರಧಾನಿ ಬಂದ ಕ್ಷಣದ ಬಗ್ಗೆ ವಿಕ್ರಮ್ ಭಾವುಕರಾಗಿ ಮಾತನಾಡಿದ್ದಾರೆ. “ಚುರುಮುರಿ ಬೆಲೆ ಎಷ್ಟು?” ಎಂದು ಮೋದಿ ಕೇಳಿದಾಗ, ವಿಕ್ರಮ್ ನಡುಗುವ ಧ್ವನಿಯಲ್ಲೇ “10 ರೂಪಾಯಿ” ಎಂದಿದ್ದಾರೆ. ಚುರುಮುರಿ ಸವಿದ ಪ್ರಧಾನಿಯವರು, ವಿಕ್ರಮ್ ನೀಡಿದ ಹತ್ತು ರೂಪಾಯಿ ಪಡೆಯಲು ನಿರಾಕರಿಸಿದರೂ ಒತ್ತಾಯ ಮಾಡಿ ಹಣ ನೀಡಿದ್ದಾರೆ. ಈ ವೇಳೆ ಅವರ ತಂದೆ ಉತ್ತಮ್ ಹಾಗೂ ತಾಯಿ ಸುನಿತಾ ಅವರ ಆರೋಗ್ಯದ ಬಗ್ಗೆಯೂ ವಿಚಾರಿಸಿ ಮೋದಿ ಕುಶಲೋಪಚಾರ ನಡೆಸಿದರು. ವಿಶೇಷವೆಂದರೆ, ಈ ಹತ್ತು ನಿಮಿಷಗಳ ಸಂಭಾಷಣೆಯಲ್ಲಿ ಪ್ರಧಾನಿಯವರು ಯಾವುದೇ ರಾಜಕೀಯ ವಿಚಾರ ಪ್ರಸ್ತಾಪಿಸದೆ ಕೇವಲ ಸ್ನೇಹಭಾವದಿಂದ ಮಾತನಾಡಿದ್ದಾರೆ ಎಂದು ವಿಕ್ರಮ್ ನೆನಪಿಸಿಕೊಂಡಿದ್ದಾರೆ.

 

ವಿಕ್ರಮ್ ಅವರು ಧರಿಸಿದ್ದ ಕೆಂಪು ಬಣ್ಣದ ಶಾಲೂ ಮೇಲೆ ಕಮಲದ ಚಿನ್ಹೆ ಇದ್ದದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಮತ್ತು ಟೀಕೆಗಳಿಗೆ ಕಾರಣವಾಗಿದೆ. ಸಾಮಾನ್ಯವಾಗಿ ಕೆಂಪು ಬಣ್ಣ ಕಮ್ಯುನಿಸ್ಟ್ ಪಕ್ಷದ ಸಂಕೇತವಾಗಿರುವುದರಿಂದ, ಕಮಲದ ಗುರುತಿನ ಈ ವಿಭಿನ್ನ ಶಾಲೂ ಪ್ರಧಾನಿ ಭೇಟಿಯಷ್ಟೇ ಗಮನ ಸೆಳೆದಿದೆ.

 

ಪ್ರಧಾನಿಯವರನ್ನು ನೋಡಿದ ಸಂಭ್ರಮದಲ್ಲಿ ಅವರ ಸಹಿ (ಆಟೋಗ್ರಾಫ್) ಪಡೆಯುವುದನ್ನು ಮರೆತುಬಿಟ್ಟೆ, ಅದೊಂದೇ ನನ್ನ ಬದುಕಿನ ದೊಡ್ಡ ಕೊರಗು” ಎಂದು ವಿಕ್ರಮ್ ಬೇಸರ ವ್ಯಕ್ತಪಡಿಸಿದ್ದಾರೆ.

​ಸದ್ಯ ವಿಕ್ರಮ್ ಅವರ ಅಂಗಡಿಗೆ ಈಗ ಗ್ರಾಹಕರ ಹಾಗೂ ಮಾಧ್ಯಮಗಳ ದಂಡೇ ಹರಿದುಬರುತ್ತಿದೆ. ಸಾಮಾನ್ಯ ವ್ಯಾಪಾರಿಯೊಬ್ಬರ ಬದುಕು ಪ್ರಧಾನಿಯವರ ಒಂದು ಭೇಟಿಯಿಂದ ಸಂಪೂರ್ಣ ಬದಲಾದ ಕಥೆ ಈಗ ರಾಷ್ಟ್ರಮಟ್ಟದಲ್ಲಿ ವೈರಲ್ ಆಗುತ್ತಿದೆ.


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin