ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿ ಮಲ್ಲಿಕಾರ್ಜುನ ಅವರ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಬೃಹತ್ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಅಧಿಕಾರಿಗಳ ಶೋಧದ ವೇಳೆ ಸಿಕ್ಕ ಆಸ್ತಿ ವಿವರಗಳನ್ನು ಕಂಡು ತನಿಖಾ ತಂಡವೇ ಬೆಚ್ಚಿಬಿದ್ದಿದೆ.
ದಾಳಿಯಲ್ಲಿ ಪತ್ತೆಯಾದ ಆಸ್ತಿ ವಿವರ:
ನಗದು: ೨.೫೩ ಕೋಟಿ ರೂಪಾಯಿ ನಗದು ಹಣ.
ಬ್ಯಾಂಕ್ ಬ್ಯಾಲೆನ್ಸ್: ವಿವಿಧ ಬ್ಯಾಂಕ್ ಖಾತೆಗಳಲ್ಲಿ ಸುಮಾರು ೧ ಕೋಟಿ ರೂಪಾಯಿ ಠೇವಣಿ.
ಜಮೀನು: ಬರೋಬ್ಬರಿ ೧೦೦.೫ ಎಕರೆ ಕೃಷಿ ಜಮೀನು.
ಸ್ಥಾವರ ಆಸ್ತಿ: ೨ ಐಷಾರಾಮಿ ಮನೆಗಳು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣ.
ಒಟ್ಟಾರೆಯಾಗಿ ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು ೧೩ ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ತನಿಖೆ ತೀವ್ರಗೊಳಿಸಿದ ಲೋಕಾಯುಕ್ತ:
ಸರಕಾರಿ ಅಧಿಕಾರಿಯಾಗಿ ಪಡೆಯುತ್ತಿದ್ದ ವೇತನಕ್ಕೂ, ಪ್ರಸ್ತುತ ಸಿಕ್ಕಿರುವ ಆಸ್ತಿಯ ಪ್ರಮಾಣಕ್ಕೂ ಎಲ್ಲೂ ಹೋಲಿಕೆಯೇ ಇಲ್ಲದಷ್ಟು ಅಸಮತೋಲನ ಕಂಡುಬಂದಿದೆ. ಈ ಪ್ರಮಾಣದ ಹಣ, ಆಸ್ತಿ ಮತ್ತು ಚಿನ್ನ-ಬೆಳ್ಳಿಯನ್ನು ಯಾವ ಮೂಲದಿಂದ ಗಳಿಸಲಾಗಿದೆ ಎಂಬ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಸಮಗ್ರ ಪರಿಶೀಲನೆ ನಡೆಸುತ್ತಿದ್ದು, ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.