Police Roundup

ಮೈಸೂರು: ಹೊಲದಲ್ಲಿ ಕಳೆ ಕೀಳುತ್ತಿದ್ದಾಗ ಭೀಕರ ದುರಂತ; ಸಿಡಿಲು ಬಡಿದು ವೃದ್ಧೆ ಸ್ಥಳದಲ್ಲೇ ಸಾವು

Share News

ಮೈಸೂರು: ಜಮೀನಿನಲ್ಲಿ ಕಳೆ ಕೀಳುವ ಕೆಲಸದಲ್ಲಿ ನಿರತರಾಗಿದ್ದ ವೃದ್ಧ ಮಹಿಳೆಯೊಬ್ಬರು ಏಕಾಏಕಿ ಸಿಡಿಲು ಬಡಿದು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹೊಸಪುರ ಗ್ರಾಮದಲ್ಲಿ ನಡೆದಿದೆ.

​ಹೊಸಪುರ ಗ್ರಾಮದ ನಿವಾಸಿ ಯಶೋದಮ್ಮ (65) ಸಿಡಿಲು ಬಡಿತಕ್ಕೆ ತುತ್ತಾಗಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.

 

ಯಶೋದಮ್ಮ ಅವರು ಗ್ರಾಮದ ಬಸಪ್ಪ ಎಂಬುವರಿಗೆ ಸೇರಿದ ಜಮೀನಿನಲ್ಲಿ ಬೀನ್ಸ್ ಬೆಳೆಯ ಕಳೆ ಕೀಳುವ ಕೆಲಸಕ್ಕಾಗಿ ಇತರ ಐದು ಮಂದಿ ಮಹಿಳೆಯರೊಂದಿಗೆ ತೆರಳಿದ್ದರು. ಒಟ್ಟು ಆರು ಜನ ಮಹಿಳೆಯರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ, ಸಂಜೆಯಾಗುತ್ತಿದ್ದಂತೆ ದಿಢೀರನೆ ಆಕಾಶದಲ್ಲಿ ದಟ್ಟ ಮೋಡ ಕವಿದು ಗುಡುಗು, ಸಿಡಿಲು ಸಹಿತ ಜೋರು ಮಳೆ ಪ್ರಾರಂಭವಾಗಿದೆ.

 

ಮಳೆಯಿಂದ ರಕ್ಷಣೆ ಪಡೆಯಲು ಎಲ್ಲರೂ ಸುರಕ್ಷಿತ ಸ್ಥಳದ ಕಡೆಗೆ ಧಾವಿಸುತ್ತಿದ್ದರು. ಈ ವೇಳೆ ಯಶೋದಮ್ಮ ಅವರು ಜಮೀನಿನ ಪಕ್ಕದಲ್ಲೇ ಇದ್ದ ಬೇವಿನ ಮರದ ಕೆಳಗೆ ಆಶ್ರಯ ಪಡೆದಿದ್ದಾರೆ. ದುರಾದೃಷ್ಟವಶಾತ್ ಅದೇ ಸಮಯದಲ್ಲಿ ಮರಕ್ಕೆ ಏಕಾಏಕಿ ಭೀಕರವಾಗಿ ಸಿಡಿಲು ಬಡಿದಿದ್ದು, ಇದರ ತೀವ್ರತೆಗೆ ಯಶೋದಮ್ಮ ಅವರು ಸ್ಥಳದಲ್ಲೇ ಜೀವಬಿಟ್ಟಿದ್ದಾರೆ. ಉಳಿದ ಮಹಿಳೆಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

ಘಟನೆ ಸಂಭವಿಸುತ್ತಿದ್ದಂತೆ ಆತಂಕಗೊಂಡ ಗ್ರಾಮಸ್ಥರು ತಕ್ಷಣವೇ ಬಿಳಿಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಲಭ್ಯವಾದ ತಕ್ಷಣ ಸ್ಥಳಕ್ಕೆ ಆಗಮಿಸಿದ ಬಿಳಿಕೆರೆ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.

​ಈ ದಾರುಣ ಘಟನೆಗೆ ಸಂಬಂಧಿಸಿದಂತೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin