ತಾಂಡವಪುರ (ಜೂನ್ 5): ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ನೂತನ ಸಚಿವರಾಗಿ ನೇಮಕಗೊಂಡಿರುವ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು, ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ದಲಿತ ಮುಖಂಡ ಹೆಚ್ಚಿಗೆ ಇಂದನ್ ಬಾಬು ಮತ್ತು ಅವರ ತಂಡದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಿ ಅಭಿನಂದಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, “ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ನಾನು ಸದಾ ಚಿರಋಣಿಯಾಗಿದ್ದೇನೆ. ಅದರಲ್ಲೂ ವರುಣಾ ವಿಧಾನಸಭಾ ಕ್ಷೇತ್ರದ ಜನತೆ, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ನಾವು ಸದಾ ಆಭಾರಿ. ನಾನು ಇಂದು ಸಚಿವನಾಗಿ ನೇಮಕಗೊಳ್ಳಲು ವರುಣಾ ಕ್ಷೇತ್ರದ ಜನತೆಯ ಆಶೀರ್ವಾದವೇ ಮುಖ್ಯ ಕಾರಣ” ಎಂದು ಕೃತಜ್ಞತೆ ಸಲ್ಲಿಸಿದರು.
ಬಳಿಕ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿಯ ಹೆಚ್ಚಿಗೆ ಗ್ರಾಮದ ದಲಿತ ಯುವ ಮುಖಂಡ ಇಂದನ್ ಬಾಬು ಮಾತನಾಡಿ, “ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರರು ಹಾಗೂ ಅತ್ಯಂತ ಸರಳ ಸಜ್ಜನಿಕೆಯ ರಾಜಕಾರಣಿಯಾದ ಡಾ. ಯತೀಂದ್ರ ಸಿದ್ದರಾಮಯ್ಯನವರು ಸಚಿವರಾಗಿರುವುದು ನಮ್ಮ ಮೈಸೂರು ಜಿಲ್ಲೆಗೆ, ಅದರಲ್ಲೂ ಹಿಂದುಳಿದ ಹಾಗೂ ದಲಿತ ವರ್ಗಗಳ ಸಮುದಾಯಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ. ಅವರಿಗೆ ನೀಡಿರುವ ಸಚಿವ ಸ್ಥಾನದ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸುವ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಗುಣ ಅವರಲ್ಲಿದೆ” ಎಂದು ಶ್ಲಾಘಿಸಿದರು.
ಇದೇ ವೇಳೆ, “ತಾಯಿ ಚಾಮುಂಡೇಶ್ವರಿಯು ನೂತನ ಸಚಿವರಿಗೆ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುವ ಶಕ್ತಿ ನೀಡಲಿ” ಎಂದು ಅವರು ಪ್ರಾರ್ಥಿಸಿದರು.
ಈ ಭವ್ಯ ಸನ್ಮಾನ ಸಮಾರಂಭದಲ್ಲಿ ಶಾಸಕರಾದ ಡಿ. ರವಿಶಂಕರ್, ಪ್ರಮುಖ ಮುಖಂಡರುಗಳಾದ ಇಂದನ್ ಬಾಬು, ಕೆ.ಬಿ. ಸ್ವಾಮಿ, ಚೋಳರಾಜು, ಕೆಂಪಣ್ಣ, ಗಿರೀಶ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.