ವಿಶಾಖಪಟ್ಟಣಂ: ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗು ಮತ್ತೊಂದು ಅಮಾಯಕ ಜೀವವನ್ನು ಬಲಿಪಡೆದಿದೆ. ಕೈತುಂಬಾ ಸಂಬಳ ಪಡೆಯುವ ಸಾಫ್ಟ್‌ವೇರ್ ಇಂಜಿನಿಯರ್ ಪತಿಯ ವರದಕ್ಷಿಣೆ ಹಪಾಹಪಿ ಮತ್ತು ಕಿರುಕುಳಕ್ಕೆ ಸಿಲುಕಿ ತೇಜಶ್ರೀ ಎಂಬ ಯುವತಿ ವಿವಾಹವಾದ ಕೇವಲ ಎರಡೇ ತಿಂಗಳಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದಿದೆ.
ಮೃತ ತೇಜಶ್ರೀ ಅವರ ವಿವಾಹ ಸೋಮೇಶ್ ಎಂಬ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ಅದ್ಧೂರಿಯಾಗಿ ನಡೆದಿತ್ತು. ಮದುವೆಯ ಸಮಯದಲ್ಲಿ ತೇಜಶ್ರೀ ಪೋಷಕರು ತಮ್ಮ ಶಕ್ತಿ ಮೀರಿ 20 ಲಕ್ಷ ರೂ. ನಗದು ಮತ್ತು 20 ತೊಲ ಚಿನ್ನವನ್ನು ವರದಕ್ಷಿಣೆಯಾಗಿ ನೀಡಿದ್ದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಸೋಮೇಶ್ ತನ್ನ ಅಸಲಿ ರೂಪ ತೋರಿಸಲು ಆರಂಭಿಸಿದ್ದ ಎನ್ನಲಾಗಿದೆ.
ಬೈಕ್ ಬೇಡಿಕೆ: ಮದುವೆಯ ನಂತರ 3 ಲಕ್ಷ ರೂ. ಬೆಲೆಯ ಬೈಕ್ ಬೇಕೆಂದು ಹಠ ಹಿಡಿದ ಸೋಮೇಶ್‌ಗೆ, ಮಗಳ ಸುಖಕ್ಕಾಗಿ ಪೋಷಕರು ಬೈಕ್ ಕೊಡಿಸಿದ್ದರು.
ಹೆಚ್ಚುವರಿ ಬೇಡಿಕೆ: ಇಷ್ಟಕ್ಕೇ ತೃಪ್ತನಾಗದ ಈತ ಭೂಮಿ ಮತ್ತು ಚಿನ್ನದ ಸರಕ್ಕಾಗಿ ಪೀಡಿಸುತ್ತಿದ್ದ. ಅಷ್ಟೇ ಅಲ್ಲದೆ, ಮದುವೆಯ ಫೋಟೋ ಆಲ್ಬಮ್ ಮಾಡಿಸಿದ 50 ಸಾವಿರ ರೂಪಾಯಿ ಖರ್ಚನ್ನೂ ಹೆಂಡತಿಯ ಮನೆಯವರಿಂದಲೇ ವಸೂಲಿ ಮಾಡುವ ಮೂಲಕ ತನ್ನ ಕಕ್ಕಸತನ ಮೆರೆದಿದ್ದ.
ವರದಕ್ಷಿಣೆ ಕಿರುಕುಳದ ಜೊತೆಗೆ ಸೋಮೇಶ್‌ಗೆ ಬೇರೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧವಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದನ್ನು ತೇಜಶ್ರೀ ಪ್ರಶ್ನಿಸಿದಾಗ ಅವರ ಮೇಲೆ ಕ್ರೂರವಾಗಿ ದೈಹಿಕ ಹಲ್ಲೆ ನಡೆಸಲಾಗುತ್ತಿತ್ತು. ಸುಖವಾಗಿರಬೇಕಾಗಿದ್ದ ಸಂಸಾರ ನರಕಸದೃಶವಾಗಿತ್ತು ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಘಟನೆ ನಡೆದ ದಿನ “ನಿಮ್ಮ ಮಗಳು ನೇಣು ಹಾಕಿಕೊಂಡಿದ್ದಾಳೆ” ಎಂದು ಸೋಮೇಶ್ ತನ್ನ ಸ್ನೇಹಿತನ ಮೂಲಕ ಫೋನ್ ಮಾಡಿಸಿದ್ದಾನೆ. ಆದರೆ, ಪೋಷಕರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಶವದ ಮೇಲೆ ಮತ್ತು ಕುತ್ತಿಗೆಯ ಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿವೆ. ಇದು ಪೂರ್ವಯೋಜಿತ ಕೊಲೆ ಎಂದು ಸಂತ್ರಸ್ತೆಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಿಶಾಖಪಟ್ಟಣಂನ ತ್ರೀ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತಿ ಸೋಮೇಶನ್ ನನ್ನು ಬಂಧಿಸಿದ್ದಾರೆ. ಸುಶಿಕ್ಷಿತನಾಗಿದ್ದರೂ ವರದಕ್ಷಿಣೆಗಾಗಿ ಹೆಂಡತಿಯನ್ನು ಚಿತ್ರಹಿಂಸೆ ನೀಡಿದ ಈತನ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.