ಹಾಸನ: ಪ್ರವಾಸದ ಖುಷಿಯಲ್ಲಿದ್ದ ಯುವಕರ ತಂಡವೊಂದರಲ್ಲಿ ಮೂವರು ಯುವಕರು ನದಿಯ ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಶೆಟ್ಟಿಹಳ್ಳಿ ಚರ್ಚ್ ಸಮೀಪದ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಸಂಭವಿಸಿದೆ.
ಬೆಂಗಳೂರು ಮೂಲದ ಚರಣ್ (20), ಮಿಲನ್ (23) ಹಾಗೂ ಮಣಿಕಂಠ (20) ನದಿಯ ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಬೆಂಗಳೂರಿನಿಂದ ಒಟ್ಟು 10 ಜನ ಯುವಕರ ತಂಡವೊಂದು ಟಿಟಿ (TT) ವಾಹನದಲ್ಲಿ ಧರ್ಮಸ್ಥಳಕ್ಕೆ ಪ್ರವಾಸ ಕೈಗೊಂಡಿತ್ತು. ದೇವರ ದರ್ಶನ ಮುಗಿಸಿಕೊಂಡು ಬೆಂಗಳೂರಿಗೆ ಹಿಂತಿರುಗುವ ಮಾರ್ಗಮಧ್ಯೆ, ಹಾಸನ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಶೆಟ್ಟಿಹಳ್ಳಿ ಮುಳುಗಡೆ ಚರ್ಚ್ ವೀಕ್ಷಿಸಲು ಬಂದಿದ್ದಾರೆ. ಈ ವೇಳೆ ಚರ್ಚ್ ಹಿಂಭಾಗದಲ್ಲಿ ಹರಿಯುವ ಹೇಮಾವತಿ ನದಿಯ ಹಿನ್ನೀರಿನ ಸೌಂದರ್ಯಕ್ಕೆ ಮರುಳಾದ ಯುವಕರು, ಈಜಾಡಲು ನೀರಿಗೆ ಇಳಿದಿದ್ದಾರೆ.
ನೀರಿಗೆ ಇಳಿದ ಯುವಕರಲ್ಲಿ ಮೃತಪಟ್ಟ ಮೂವರಿಗೂ ಸರಿಯಾಗಿ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ನೀರಿನ ಆಳ ಮತ್ತು ಸುಳಿಯ ಅರಿವಿಲ್ಲದೆ ಅವರು ನದಿಯ ಆಳಕ್ಕೆ ಇಳಿದಿದ್ದಾರೆ. ಪರಿಣಾಮವಾಗಿ ಮೂವರೂ ನೀರಿನಲ್ಲಿ ಮುಳುಗಲಾರಂಭಿಸಿದ್ದಾರೆ.
ತಮ್ಮ ಕಣ್ಮುಂದೆಯೇ ಸ್ನೇಹಿತರು ನೀರಿನಲ್ಲಿ ಮುಳುಗಿ ಜೀವನ್ಮರಣ ಹೋರಾಟ ನಡೆಸುತ್ತಿರುವುದನ್ನು ಕಂಡು ಉಳಿದ ಯುವಕರು ದಿಕ್ಕುತೋಚದಂತಾಗಿದ್ದಾರೆ. ತಕ್ಷಣ ದಡಕ್ಕೆ ಓಡಿಬಂದ ಅವರು ರಕ್ಷಣೆಗಾಗಿ ಜೋರಾಗಿ ಕಿರುಚಾಡಿದ್ದಾರೆ. ಆದರೆ, ಸ್ಥಳೀಯರು ಧಾವಿಸುವಷ್ಟರಲ್ಲಾಗಲೇ ಚರಣ್, ಮಿಲನ್ ಮತ್ತು ಮಣಿಕಂಠ ನೀರಿನ ಆಳದಲ್ಲಿ ಮುಳುಗಿ ಉಸಿರು ಚೆಲ್ಲಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಗೊರೂರು ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ನದಿಯಲ್ಲಿ ಮುಳುಗಿರುವ ಮೂವರು ಯುವಕರ ಶವಗಳನ್ನು ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಈಜುಗಾರರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಈ ದುರ್ಘಟನೆಯು ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪ್ರವಾಸಕ್ಕೆಂದು ನಗುನಗುತ್ತಾ ಮನೆಯಿಂದ ಹೊರಟಿದ್ದ ಯುವಕರು ಹೆಣವಾಗಿರುವ ಸುದ್ದಿ ಕೇಳಿ ಅವರ ಕುಟುಂಬಸ್ಥರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯ ಆಧಾರ ಸ್ತಂಭಗಳಾಗಬೇಕಿದ್ದ ಯುವಕರ ಸಾವು ಇಡೀ ಕುಟುಂಬಸ್ಥರಲ್ಲಿ ಕಣ್ಣೀರು ತರಿಸಿದೆ.