ಹೈದರಾಬಾದ್ (ತೆಲಂಗಾಣ): ಪ್ರಿಯಕರನ ದೈಹಿಕ ಮೋಹಕ್ಕೆ ಬಿದ್ದ ಮಹಿಳೆಯೊಬ್ಬಳು, ಹೆತ್ತ ಮಗಳನ್ನೂ ಲೆಕ್ಕಿಸದೆ ತನ್ನ ಪತಿಯನ್ನೇ ಅತ್ಯಂತ ಭೀಕರವಾಗಿ ಕೊಲೆ ಮಾಡಿ ಸಮಾಧಿ ಮಾಡಿರುವ ದಾರುಣ ಘಟನೆಯೊಂದು ತೆಲಂಗಾಣದ ನಾರಾಯಣಖೇಡ್‌ನಲ್ಲಿ ಬೆಳಕಿಗೆ ಬಂದಿದೆ. ಯಾರಿಗೂ ಅನುಮಾನ ಬಾರದಿರಲು ಸಿನಿಮೀಯ ಶೈಲಿಯಲ್ಲಿ ಸ್ಕೆಚ್ ಹಾಕಿ ಪತಿಯನ್ನು ಮುಗಿಸಿರುವ ಈ ಕೃತ್ಯ ಸಮಾಜವನ್ನೇ ಬೆಚ್ಚಿಬೀಳಿಸಿದೆ.
ಕೊಲೆಯಾದ ದುರ್ದೈವಿಯನ್ನು ಮುತ್ಯಂ ರೆಡ್ಡಿ ಎಂದು ಗುರುತಿಸಲಾಗಿದೆ. ಇವರು ಬೋರ್‌ವೆಲ್ ರಿಪೇರಿ ಕೆಲಸ ಮಾಡಿಕೊಂಡಿದ್ದರು. ಇವರ ಪತ್ನಿ ಕಲ್ಪನಾ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಆಕೆಗೆ ಆರ್‌ಟಿಸಿ (RTC) ಮೆಕಾನಿಕ್ ಆಗಿದ್ದ ಪಂಡರಿ ಎಂಬಾತನ ಪರಿಚಯವಾಗಿದೆ. ಈ ಪರಿಚಯ ದಿನಕಳೆದಂತೆ ಅಕ್ರಮ ಸಂಬಂಧಕ್ಕೆ ತಿರುಗಿದೆ. ಇವರ ಈ ಅನೈತಿಕ ಸಂಬಂಧಕ್ಕೆ ಪತಿ ಮುತ್ಯಂ ರೆಡ್ಡಿ ಅಡ್ಡಿಯಾಗತೊಡಗಿದ್ದರಿಂದ, ಆತನನ್ನು ರಸ್ತೆಯಿಂದಲೇ ಮುಗಿಸಿಬಿಡಲು ಕಲ್ಪನಾ ಮತ್ತು ಆಕೆಯ ಪ್ರಿಯಕರ ಪಂಡರಿ ತೀರ್ಮಾನಿಸಿದ್ದರು.
ಕೊಲೆ ಮಾಡಲು ಇಬ್ಬರೂ ಸೇರಿ ಮಾಸ್ಟರ್ ಪ್ಲಾನ್ ಮಾಡಿದ್ದರು. ಯಾರಿಗೂ ಯಾವುದೇ ಅನುಮಾನ ಬರಬಾರದು ಎಂದು ಮುಂಜಾಗ್ರತೆಯಾಗಿ, ‘ತಮ್ಮ ತಾತನ ಸಮಾಧಿ’ ನಿರ್ಮಿಸಬೇಕಿದೆ ಎಂದು ಸ್ಥಳೀಯವಾಗಿ ಸುಳ್ಳು ಹೇಳಿ, ಜೆಸಿಬಿ (JCB) ಮೂಲಕ ಮೊದಲೇ ಒಂದು ದೊಡ್ಡ ಗುಂಡಿಯನ್ನು ತೋಡಿಸಿ ಸಿದ್ಧವಾಗಿಟ್ಟುಕೊಂಡಿದ್ದರು.
ಯೋಜನೆಯಂತೆ, ಕಲ್ಪನಾ ಮತ್ತು ಪಂಡರಿ ಸೇರಿ ಮುತ್ಯಂ ರೆಡ್ಡಿಗೆ ಅತಿಯಾಗಿ ಮದ್ಯ ಕುಡಿಸಿದ್ದಾರೆ. ಆತ ಪೂರ್ಣ ಪ್ರಮಾಣದಲ್ಲಿ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಇಬ್ಬರೂ ಸೇರಿ ಆತನನ್ನು ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಬಳಿಕ ಕತ್ತಲಾಗುತ್ತಿದ್ದಂತೆ, ಯಾರ ಕಣ್ಣಿಗೂ ಬೀಳದಂತೆ ಮೊದಲೇ ಸಿದ್ಧಪಡಿಸಿದ್ದ ಆ ‘ಸಮಾಧಿ’ಯ ಗುಂಡಿಯೊಳಗೆ ಶವವನ್ನು ಹಾಕಿ ಮಣ್ಣು ಮುಚ್ಚಿ ಸಾಕ್ಷ್ಯ ನಾಶಪಡಿಸಿದ್ದರು.
ಮುತ್ಯಂ ರೆಡ್ಡಿ ದಿಢೀರನೆ ನಾಪತ್ತೆಯಾದ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಪತ್ನಿ ಕಲ್ಪನಾ ನಡವಳಿಕೆ ಮೇಲೆ ತೀವ್ರ ಅನುಮಾನ ವ್ಯಕ್ತವಾಗಿದೆ. ತಕ್ಷಣ ಆಕೆಯ ಮೊಬೈಲ್‌ನ ಕಾಲ್ ಡೇಟಾ ರೆಕಾರ್ಡ್ (CDR) ಪರಿಶೀಲಿಸಿದಾಗ, ಆಕೆ ಪಂಡರಿ ಎಂಬಾತನ ಜೊತೆ ನಿರಂತರ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ಆಕೆಯನ್ನು ವಶಕ್ಕೆ ಪಡೆದು ಪೋಲಿಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಕೊಲೆಯ ಸಂಪೂರ್ಣ ರಹಸ್ಯ ಬಯಲಾಗಿದೆ.
ಕೇವಲ ಪ್ರಿಯಕರನ ದೈಹಿಕ ಸುಖಕ್ಕಾಗಿ ಪತಿಯನ್ನೇ ಕೊಂದ ಈ ಪಾಪಿ ತಾಯಿ, ತನಗಿರುವ 5 ವರ್ಷದ ಹೆಣ್ಣು ಮಗಳನ್ನು ಅನಾಥವಾಗಿಸಿದ್ದಾಳೆ. ತಂದೆ ತೀರಿಕೊಂಡರೆ, ತಾಯಿ ಕೃತ್ಯ ಎಸಗಿ ಜೈಲು ಪಾಲಾಗಿದ್ದಾಳೆ.
ಸದ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ತಹಶೀಲ್ದಾರ್ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿಗಳಾದ ಕಲ್ಪನಾ ಹಾಗೂ ಪಂಡರಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.