Skip to main content

Police Roundup

ರಾಜ್ಯಾದ್ಯಂತ ಇಂದಿನಿಂದ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಆರಂಭ: ಅಕ್ಟೋಬರ್ 7ಕ್ಕೆ ಅಂತಿಮ ಪಟ್ಟಿ ಪ್ರಕಟ!

Share News

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ (ಮಂಗಳವಾರ) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಅಧಿಕೃತವಾಗಿ ಆರಂಭಗೊಳ್ಳಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ಅನ್ಬುಕುಮಾರ್ ತಿಳಿಸಿದ್ದಾರೆ. ಈ ಬೃಹತ್ ಜನಾಂದೋಲನ ಪ್ರಕ್ರಿಯೆಯ ಪ್ರತಿಯೊಂದು ಮಾಹಿತಿಯೂ ಇನ್ಮುಂದೆ ಡಿಜಿಟಲ್ ರೂಪದಲ್ಲಿ ಸಾರ್ವಜನಿಕರಿಗೆ ಆನ್‌ಲೈನ್‌ನಲ್ಲೇ ಲಭ್ಯವಿರಲಿದೆ.

 

​ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಪ್ರಸ್ತುತ ಒಟ್ಟು 5,54,32,314 ಮತದಾರರಿದ್ದಾರೆ. ಇವರಲ್ಲಿ ಈಗಾಗಲೇ ಶೇ 91.61 ರಷ್ಟು ಮತದಾರರು ಮ್ಯಾಪಿಂಗ್‌ಗೆ ಒಳಪಟ್ಟಿದ್ದು, ಇನ್ನುಳಿದ 46,52,504 ಮತದಾರರನ್ನು ಮ್ಯಾಪಿಂಗ್ ವ್ಯಾಪ್ತಿಗೆ ತರಲು ಈ ವಿಶೇಷ ಸಮಗ್ರ ಪರಿಷ್ಕರಣೆ ಹಮ್ಮಿಕೊಳ್ಳಲಾಗಿದೆ,” ಎಂದರು.

 

ರಾಜ್ಯದಲ್ಲಿರುವ ಒಟ್ಟು 1 ಕೋಟಿ 88 ಲಕ್ಷ ಮನೆಗಳಿಗೂ ಬೂತ್ ಮಟ್ಟದ ಅಧಿಕಾರಿಗಳು (BLO) ಖುದ್ದಾಗಿ ಭೇಟಿ ನೀಡಿ ಗಣತಿ ನಮೂನೆಗಳನ್ನು (Enumeration Form) ವಿತರಿಸಲಿದ್ದಾರೆ.

 

​ಅರ್ಜಿ ಸಲ್ಲಿಕೆ: ಸಾರ್ವಜನಿಕರು ಈ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ ಅಧಿಕಾರಿಗಳಿಗೆ ವಾಪಸ್ ನೀಡಬೇಕು. ಒಂದು ವೇಳೆ ಮುಖ್ಯ ಮತದಾರರು ಲಭ್ಯವಿಲ್ಲದಿದ್ದರೆ, ಕುಟುಂಬದ ಇತರ ಸದಸ್ಯರು ಸಹಿ ಮಾಡಬಹುದು.

 

​ಮೂರು ಬಾರಿ ಭೇಟಿ: ನಾಗರಿಕರು ಮನೆಯಲ್ಲಿ ಇಲ್ಲದಿದ್ದರೆ, ಫಾರಂ ಪಡೆಯಲು ಅಧಿಕಾರಿಗಳು ಕನಿಷ್ಠ 3 ಬಾರಿಯಾದರೂ ಮನೆಗೆ ಭೇಟಿ ನೀಡಲಿದ್ದಾರೆ. ಪ್ರಕ್ರಿಯೆ ಮುಗಿದ ತಕ್ಷಣ ಮನೆಗಳಿಗೆ ವಿಶೇಷ ಸ್ಟಿಕ್ಕರ್ ಅಂಟಿಸಲಾಗುತ್ತದೆ.

 

​ದಾಖಲೆಗಳ ಅಗತ್ಯವಿಲ್ಲ: ಪ್ರಮುಖವಾಗಿ, ಸಾರ್ವಜನಿಕರು ಬಿಎಲ್‌ಒಗಳಿಗೆ ಯಾವುದೇ ರೀತಿಯ ಭೌತಿಕ ದಾಖಲೆಗಳನ್ನು (Physical Documents) ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

 

ಈ ಬೃಹತ್ ಕಾರ್ಯಕ್ಕಾಗಿ ರಾಜ್ಯಾದ್ಯಂತ ಒಟ್ಟು 59,050 ಬೂತ್ ಮಟ್ಟದ ಅಧಿಕಾರಿಗಳು, 31 ಜಿಲ್ಲಾ ಚುನಾವಣಾಧಿಕಾರಿಗಳು, 4 ಅಪರ ಜಿಲ್ಲಾ ಚುನಾವಣಾಧಿಕಾರಿಗಳು, 224 ನೋಂದಣಾಧಿಕಾರಿಗಳು, 336 ಸಹಾಯಕ ನೋಂದಣಾಧಿಕಾರಿಗಳು, 7,556 ಬಿಎಲ್‌ಒ ಹಾಗೂ 1,15,112 ಬಿಎಲ್‌ಎ (BLA)ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

 

ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಆಯಾ ವ್ಯಾಪ್ತಿಯ BLO ಮತ್ತು BLA ಗಳ ಮೊಬೈಲ್ ಸಂಖ್ಯೆಗಳನ್ನು ಪ್ರಕಟಿಸಲಾಗುವುದು. ಇದರೊಂದಿಗೆ, ಎಷ್ಟು ಮನೆಗಳಿಗೆ ಭೇಟಿ ನೀಡಲಾಗಿದೆ, ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬ ದೈನಂದಿನ ಪ್ರಗತಿಯ ವರದಿಯನ್ನು ಪ್ರತಿದಿನ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ.

 

​ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಎದುರಾಗದಂತೆ ಅಧಿಕಾರಿಗಳಿಗೆ ವಿಶೇಷ ವೈ-ಫೈ (Wi-Fi) ಸೌಲಭ್ಯ ಒದಗಿಸಲಾಗಿದೆ. ಅಲ್ಲದೆ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ‘ವೋಟರ್ ಫೆಸಿಲಿಟಿ ಸೆಂಟರ್’ (Voter Facility Center) ತೆರೆಯಲಾಗಿದೆ.

 

ಜೂನ್ 30 ರಿಂದ ಜುಲೈ 29: ಅಧಿಕಾರಿಗಳಿಂದ ಮನೆ ಮನೆಗೆ ಭೇಟಿ, ಮಾಹಿತಿ ಸಂಗ್ರಹ.

​ಜುಲೈ 27: ಮತಗಟ್ಟೆಗಳ ತಾರ್ಕಿಕ ಮರುಹೊಂದಾಣಿಕೆ ಹಾಗೂ ವಿಂಗಡಣೆ.

​ಆಗಸ್ಟ್ 5: ಮತದಾರರ ಪ್ರಥಮ ಕರಡು ಪಟ್ಟಿ (Draft Electoral Roll) ಬಿಡುಗಡೆ.

​ಆಗಸ್ಟ್ 5 ರಿಂದ ಸೆಪ್ಟೆಂಬರ್ 4: ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ.

​ಅಕ್ಟೋಬರ್ 7: ಎಲ್ಲಾ ಆಕ್ಷೇಪಣೆಗಳ ವಿಲೇವಾರಿ ಮುಗಿಸಿ, ಅಂತಿಮ ಮತದಾರರ ಪಟ್ಟಿ ಅಧಿಕೃತ ಪ್ರಕಟಣೆ.

 

​ರಾಜ್ಯದ ಪ್ರತಿಯೊಬ್ಬ ಅರ್ಹ ನಾಗರಿಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಖಚಿತಪಡಿಸಿಕೊಳ್ಳಲು ಮತ್ತು ಈ ರಾಷ್ಟ್ರೀಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಮುಖ್ಯ ಚುನಾವಣಾಧಿಕಾರಿಗಳು ಮನವಿ ಮಾಡಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin