ಬೆಂಗಳೂರು: ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಆದೇಶದ ಮೇರೆಗೆ ಈಶಾನ್ಯ ವಿಭಾಗದ ಅಮೃತಹಳ್ಳಿ ಪೊಲೀಸ್ ಠಾಣೆಯ ಆಡಳಿತಾತ್ಮಕ ಹಾಗೂ ತನಿಖಾ ಕಡತಗಳ ಸಮಗ್ರ ಪರಿಶೀಲನೆ (Inspection) ನಡೆಸಲಾಯಿತು.
ಠಾಣೆಗೆ ಆಗಮಿಸಿದ ಹಿರಿಯ ಅಧಿಕಾರಿಗಳು ಗೌರವ ವಂದನೆ ಸ್ವೀಕರಿಸಿ, ಠಾಣೆಯ ದೈನಂದಿನ ಚಟುವಟಿಕೆಗಳು, ಕಡತಗಳ ನಿರ್ವಹಣೆ ಹಾಗೂ ಸಿಬ್ಬಂದಿಯ ಕುಂದುಕೊರತೆಗಳನ್ನು ಆಲಿಸಿದರು. ಸಿಬ್ಬಂದಿಯ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಾಹನ ಹಾಗೂ ಮುದ್ದೆಮಾಲು ವಿಲೇವಾರಿ: ಠಾಣಾ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಹಾಗೂ ವಾರಸುದಾರರಿಲ್ಲದ (Unclaimed) ವಾಹನಗಳನ್ನು ನಿಯಮಾನುಸಾರ ತ್ವರಿತವಾಗಿ ವಿಲೇವಾರಿ ಮಾಡಲು ನಿರ್ದೇಶಿಸಲಾಯಿತು. ಜೊತೆಗೆ ಮುದ್ದೆಮಾಲುಗಳ ಸುರಕ್ಷಿತ ನಿರ್ವಹಣೆಗೆ ಮಾರ್ಗದರ್ಶನ ನೀಡಲಾಯಿತು.
ಗುಣಮಟ್ಟದ ತನಿಖೆ ಮತ್ತು ದೋಷಾರೋಪಣಾ ಪಟ್ಟಿ: ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಹಾಗೂ ಪ್ರಸ್ತುತ ತನಿಖಾ ಹಂತದಲ್ಲಿರುವ ಪ್ರಕರಣಗಳ ಪ್ರಗತಿ ಪರಿಶೀಲಿಸಲಾಯಿತು. ನಿಗದಿತ ಅವಧಿಯೊಳಗೆ ಗುಣಮಟ್ಟದ ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿ (Charge sheet) ಸಲ್ಲಿಸಲು ಮತ್ತು ಕೋರ್ಟ್ ನಡಾವಳಿಗಳನ್ನು ಸರಿಯಾಗಿ ಮಾನಿಟರಿಂಗ್ ಮಾಡಲು ತಿಳಿಸಲಾಯಿತು.
ಸಂತ್ರಸ್ತರ ದಿನಾಚರಣೆ: ಪ್ರತಿ ತಿಂಗಳು ನಿಯಮಿತವಾಗಿ ‘ಸಂತ್ರಸ್ತರ ದಿನಾಚರಣೆ’ ಆಯೋಜಿಸಿ, ಸಂತ್ರಸ್ತರ ಕುಂದುಕೊರತೆಗಳನ್ನು ಆಲಿಸಿ ಅವರಿಗೆ ಅಗತ್ಯ ಕಾನೂನು ನೆರವು ಹಾಗೂ ಬೆಂಬಲ ಒದಗಿಸಲು ಆದೇಶಿಸಲಾಯಿತು.
ಸಬ್ ಬೀಟ್ (Sub Beat) ಜಾಗೃತಿ ಸಭೆಗಳು: ಸಬ್ ಬೀಟ್‌ಗಳಲ್ಲಿ ಸಾರ್ವಜನಿಕರ ಸಭೆ ನಡೆಸಿ ಸೈಬರ್ ಅಪರಾಧಗಳು, ಮಾದಕ ವಸ್ತುಗಳ ತಡೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಹಾಗೂ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು ಸೂಚಿಸಲಾಯಿತು.
ಠಾಣೆಯ ನೈರ್ಮಲ್ಯ, ಸಿಬ್ಬಂದಿಯ ಶಿಸ್ತು, ಬೀಟ್ ವ್ಯವಸ್ಥೆಯನ್ನು ಬಲಪಡಿಸುವುದು, ಬಾಕಿ ವಾರಂಟ್‌ಗಳ ಜಾರಿ, ರೌಡಿಶೀಟರ್‌ಗಳ ಮೇಲೆ ತೀವ್ರ ಕಣ್ಣಾವಲು, ಸಿಸಿಟಿವಿ ಕ್ಯಾಮೆರಾಗಳ ಬಳಕೆ ಹಾಗೂ ತುರ್ತು ಕರೆಗಳಿಗೆ (Emergency calls) ತಕ್ಷಣವೇ ಸ್ಪಂದಿಸುವ ಮೂಲಕ ಸಾರ್ವಜನಿಕ ಸ್ನೇಹಿ ಪೊಲೀಸ್ ಸೇವೆ ಒದಗಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಯಿತು.
