Skip to main content

Police Roundup

ಗಂಡನ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್ – ತಾಯಿ ಮತ್ತು ಮಗ ಸೇರಿ ನಡೆಸಿದ್ದ ಕೃತ್ಯ ತನಿಖೆಯಲ್ಲಿ ಬಯಲು!

Share News

ಕೋಲಾರ: ಆಸ್ತಿ ವಿಚಾರವಾಗಿ ಗಂಡನನ್ನು ಕೊಲೆ ಮಾಡಿ, ಸ್ವತಃ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದ ಪತ್ನಿಯ ಹೇಳಿಕೆ ಇದೀಗ ದೊಡ್ಡ ತಿರುವು ಪಡೆದುಕೊಂಡಿದೆ. ತಾಯಿ ಮತ್ತು ಮಗ ಇಬ್ಬರೂ ಸೇರಿಕೊಂಡು ಈ ಕೊಲೆ ಕೃತ್ಯ ಎಸಗಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

 

​ಕೋಲಾರ ತಾಲೂಕಿನ ಚನ್ನಸಂದ್ರ ಗ್ರಾಮದಲ್ಲಿ ನಿನ್ನೆ ರಾತ್ರಿ ನಾರಾಯಣಸ್ವಾಮಿ (66) ಎಂಬುವವರ ಕೊಲೆ ನಡೆದಿತ್ತು. ಕೊಲೆಯ ನಂತರ ಪತ್ನಿ ಜಗದಾಂಭ (58) ತಾನೊಬ್ಬಳೇ ಗಂಡನನ್ನು ಕೊಂದಿರುವುದಾಗಿ ಪೊಲೀಸರೆದುರು ಶರಣಾಗಿದ್ದರು. ಆದರೆ, ಪೊಲೀಸರು ನಡೆಸಿದ ಸತತ ತನಿಖೆಯ ವೇಳೆ ಕೊಲೆಯ ಹಿಂದಿದ್ದ ಅಸಲಿ ಸತ್ಯ ಬಹಿರಂಗವಾಗಿದೆ.

 

​ಊಟದಲ್ಲಿ ನಿದ್ರೆ ಮಾತ್ರೆ ನೀಡಿ ಕೊಲೆ:

ನಾರಾಯಣಸ್ವಾಮಿ ಅವರು ತಮ್ಮ ಒಂದು ಎಕರೆ ಜಮೀನನ್ನು ಮಾರಾಟ ಮಾಡಿದ್ದರು. ಈ ಜಮೀನು ಮಾರಾಟದ ಹಣದಲ್ಲಿ ತಮಗೂ ಪಾಲು ನೀಡಬೇಕೆಂದು ಪತ್ನಿ ಜಗದಾಂಭ ಹಾಗೂ ಪುತ್ರ ಪ್ರಮೋದ್ ನಿರಂತರವಾಗಿ ಒತ್ತಡ ಹೇರುತ್ತಿದ್ದರು. ಕಳೆದ 15 ವರ್ಷಗಳಿಂದ ನಾರಾಯಣಸ್ವಾಮಿ ಅವರು ತಾಯಿ-ಮಗನಿಂದ ದೂರವಾಗಿದ್ದರು ಎಂದು ತಿಳಿದುಬಂದಿದೆ.

 

​ಘಟನೆ ನಡೆದ ರಾತ್ರಿ ಜಗದಾಂಭ, ನಾರಾಯಣಸ್ವಾಮಿ ಅವರ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ಪುತ್ರ ಪ್ರಮೋದ್ ಸಹಾಯದೊಂದಿಗೆ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

​ಆಸ್ಪತ್ರೆಗೆ ದಾಖಲಿಸಿ ನಾಟಕವಾಡಿದ್ದ ಮಗ:

ಕೊಲೆಯಾದ ನಂತರ ತಂದೆಯನ್ನು ಬದುಕಿಸುವಂತೆ ನಟಿಸಿ ಆಸ್ಪತ್ರೆಗೆ ದಾಖಲಿಸಿದ್ದ ಪುತ್ರ ಪ್ರಮೋದ್‌ನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಪ್ರಕರಣದ ರಹಸ್ಯ ಹೊರಬಿದ್ದಿದೆ. ವಿಚಾರಣೆ ವೇಳೆ ತಾಯಿ ಮತ್ತು ಮಗ ಸೇರಿಕೊಂಡೇ ನಾರಾಯಣಸ್ವಾಮಿ ಅವರ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

 

​ಈ ಕುರಿತು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕನ್ನಿಕಾ ಸಿಕ್ರಿವಾಲ್ ಅವರು ಮಾಹಿತಿ ನೀಡಿದ್ದು, ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಬಂಧಿಸಲಾಗಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin