ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಹೆದ್ದಾರಿಯಲ್ಲೇ ಯುವಕರ ಪಡೆ ಡೆಡ್ಲಿ ಬೈಕ್ ವ್ಹೀಲಿಂಗ್ ನಡೆಸಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಿಗ್ಗೆಯಿಂದಲೇ ಗಿಜಿಗುಡುವ ಬಿಡುವಿಲ್ಲದ ಹೊಸೂರು ಮುಖ್ಯರಸ್ತೆಯಲ್ಲಿ, ಅದೂ ನೇರವಾಗಿ ಹೆಬ್ಬಗೋಡಿ ಪೊಲೀಸ್ ಠಾಣೆಯ ಮುಂಭಾಗದಲ್ಲಿಯೇ ಈ ಪುಂಡಾಟಿಕೆ ನಡೆದಿದೆ. ನಂಬರ್ ಪ್ಲೇಟ್ ಇಲ್ಲದ ಬೈಕ್ನಲ್ಲಿ ಜೀವದ ಹಂಗು ತೊರೆದು ಅಪಾಯಕಾರಿ ರೀತಿಯಲ್ಲಿ ವ್ಹೀಲಿಂಗ್ ನಡೆಸುತ್ತಿರುವ ದೃಶ್ಯಗಳನ್ನು ಹಿಂದಿನಿಂದ ಬಂದ ಕಾರು ಚಾಲಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಪ್ರಸ್ತುತ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಅಪಘಾತದ ಭೀತಿ – ಸಾರ್ವಜನಿಕರ ಆಕ್ರೋಶ
ರಸ್ತೆಯಲ್ಲಿ ಕಾರು, ದ್ವಿಚಕ್ರ ವಾಹನ ಹಾಗೂ ಇತರ ವಾಹನಗಳ ನಿರಂತರ ಸಂಚಾರದ ನಡುವೆಯೇ ಯುವಕರು ಈ ಸಾಹಸ ಪ್ರದರ್ಶನಕ್ಕಿಳಿದಿದ್ದರು. ವ್ಹೀಲಿಂಗ್ ವೇಳೆ ಸ್ವಲ್ಪ ಎಚ್ಚರ ತಪ್ಪಿದ್ದರೂ ದೊಡ್ಡಮಟ್ಟದ ಭೀಕರ ಅಪಘಾತ ಸಂಭವಿಸುವ ಭೀತಿ ಎದುರಾಗಿತ್ತು. ಸಾರ್ವಜನಿಕ ರಸ್ತೆಯನ್ನು ತಮ್ಮ ಖಾಸಗಿ ಕ್ರೀಡಾಂಗಣದಂತೆ ಬಳಸಿಕೊಂಡ ಯುವಕರ ವರ್ತನೆಗೆ ಸವಾರರು ತೀವ್ರ ಕಿಡಿಕಾರಿದ್ದಾರೆ.
ಕಠಿಣ ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ಪೊಲೀಸ್ ಠಾಣೆಯ ಮೂಗಿನ ತುದಿಯಲ್ಲೇ ಈ ರೀತಿಯ ಕೃತ್ಯ ನಡೆದಿರುವುದು ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ. ವೈರಲ್ ಆಗಿರುವ ವಿಡಿಯೊ ತುಣುಕನ್ನು ಆಧಾರವಾಗಿಟ್ಟುಕೊಂಡು, ನಂಬರ್ ಪ್ಲೇಟ್ ಇಲ್ಲದ ಬೈಕ್ ಹಾಗೂ ವ್ಹೀಲಿಂಗ್ ನಡೆಸಿದ ಪುಂಡರನ್ನು ತಕ್ಷಣವೇ ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸ್ಥಳೀಯರು ಹಾಗೂ ವಾಹನ ಸವಾರರು ಪೊಲೀಸರನ್ನು ಒತ್ತಾಯಿಸಿದ್ದಾರೆ.