ಅವಲಹಳ್ಳಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಅವಲಹಳ್ಳಿ ಪೊಲೀಸರು, ನಾಲ್ವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಒಟ್ಟು 815.4 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಈ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ ₹1,14,10,000/- (ಒಂದು ಕೋಟಿ ಹದಿನಾಲ್ಕು ಲಕ್ಷ ಹತ್ತು ಸಾವಿರ ರೂಪಾಯಿ) ಎಂದು ಅಂದಾಜಿಸಲಾಗಿದೆ.
ಅಷ್ಟೇ ಅಲ್ಲದೆ, ಆರೋಪಿಗಳ ವಶದಲ್ಲಿದ್ದ ₹9,50,000/- (ಒಂಬತ್ತು ಲಕ್ಷ ಐವತ್ತು ಸಾವಿರ ರೂಪಾಯಿ) ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ/ಕಳವು ಮಾಡಿದ್ದ ಸುಮಾರು ₹5,00,000/- (ಐದು ಲಕ್ಷ ರೂಪಾಯಿ) ಮೌಲ್ಯದ 03 ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಅವಲಹಳ್ಳಿ ಪೊಲೀಸರ ಈ ಸಮಯೋಚಿತ ಕಾರ್ಯಾಚರಣೆಯಿಂದ ಎರಡು ಪ್ರಮುಖ ಕಳ್ಳತನ ಪ್ರಕರಣಗಳು ತಾರ್ಕಿಕ ಅಂತ್ಯ ಕಂಡಿದ್ದು, ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.