ಬೆಂಗಳೂರು: ಪಾರ್ಟಿಯೊಂದರಲ್ಲಿ ಸ್ನೇಹಿತರ ನಡುವೆ ನಡೆದ ಅಸಂಬದ್ಧ ತಮಾಷೆ ಹಾಗೂ ಕ್ಷಣಿಕ ಕೋಪದ ಹಲ್ಲೆಯು ಕೊನೆಗೆ ಯುವಕನೊಬ್ಬನ ಆತ್ಮಹತ್ಯೆಗೆ ಕಾರಣವಾಗಿರುವ ಘೋರ ದುರ್ಘಟನೆ ಸಿಲಿಕಾನ್ ಸಿಟಿಯಲ್ಲಿ ಸಂಭವಿಸಿದೆ.
ಮೂಲತಃ ತ್ರಿಪುರಾ ಮೂಲದ, ಬೆಂಗಳೂರಿನ ಕೋರಮಂಗಲದ ಪಬ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ತಪಾನ್ ನಾಥ್ (೨೮) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಇತ್ತೀಚೆಗೆ ತಪಾನ್ ನಾಥ್ ತನ್ನ ಸ್ನೇಹಿತರೊಂದಿಗೆ ಪಾರ್ಟಿಯೊಂದಕ್ಕೆ ಹೋಗಿದ್ದಾಗ ಸ್ನೇಹಿತರ ನಡುವೆ ಗಲಾಟೆ ನಡೆದಿದೆ. ಈ ವೇಳೆ ತಮಾಷೆಗಾಗಿಯೋ ಅಥವಾ ಸಿಟ್ಟಿನಿಂದಲೋ ಸ್ನೇಹಿತರು ತಪಾನ್‌ನ ಮರ್ಮಾಂಗದ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ತಪಾನ್, ಅಂಜಿಕೆ ಹಾಗೂ ಮುಜುಗರದಿಂದಾಗಿ ವಿಷಯವನ್ನು ಮನೆಯವರಿಗೆ ತಿಳಿಸದೆ ರಹಸ್ಯವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದನು.
ಆಸ್ಪತ್ರೆಯಲ್ಲಿ ವೈದ್ಯರು ತಪಾನ್‌ಗೆ ಶಸ್ತ್ರಚಿಕಿತ್ಸೆ ನಡೆಸಿದ್ದರಾದರೂ, ಹಲ್ಲೆಯ ತೀವ್ರತೆಯಿಂದಾಗಿ ಆತ ಮುಂದಕ್ಕೆ ಮಕ್ಕಳ ಭಾಗ್ಯವನ್ನು ಕಳೆದುಕೊಂಡಿದ್ದಾನೆ ಎಂಬ ಆಘಾತಕಾರಿ ಮಾಹಿತಿಯನ್ನು ನೀಡಿದ್ದಾರೆ. ಇನ್ನು ಮುಂದೆ ತನಗೆ ಮಕ್ಕಳಾಗುವುದಿಲ್ಲ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾಗದ ಯುವಕ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು.
ಇದೇ ಮನಸ್ತಾಪದಲ್ಲಿ ಒಂಟಿತನದಿಂದ ನೊಂದ ತಪಾನ್ ನಾಥ್, ವಿವೇಕನಗರದಲ್ಲಿದ್ದ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಾರ್ಟಿಯ ಮೋಜು ಮತ್ತು ಕ್ಷಣಿಕ ಕೋಪ ಯುವಕನ ಪ್ರಾಣವನ್ನೇ ಬಲಿಪಡೆದಿದ್ದು, ಈ ಕುರಿತು ವಿವೇಕನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.