Skip to main content

Police Roundup

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಮೇಲೆ ನಡುರಸ್ತೆಯಲ್ಲೇ ಭೀಕರ ಚಾಕು ಇರಿತ: ಮೂರು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಲಾ ವಿದ್ಯಾರ್ಥಿನಿ ಸಾವು, ಇಬ್ಬರು ಆರೋಪಿಗಳ ಬಂಧನ

Share News

ಬೆಂಗಳೂರು: ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಯುವತಿಯೊಬ್ಬಳಿಗೆ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹೆಚ್.ಎ.ಎಲ್ ರಸ್ತೆಯ ಕೋಡಿಹಳ್ಳಿಯಲ್ಲಿ ನಡೆದಿದೆ. ಚಾಕು ಇರಿತಕ್ಕೊಳಗಾಗಿ ತೀವ್ರ ರಕ್ತಸ್ರಾವದಿಂದ ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಯುವತಿ ಅಮೃತ, ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

 

​ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯ ಎಸಗಿದ ಸಹೋದರರಾದ ಸೂರ್ಯ ಹಾಗೂ ಧನುಷ್ ಎಂಬ ಇಬ್ಬರು ಆರೋಪಿಗಳನ್ನು ಜೀವನಭೀಮಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 

ಮೃತ ಅಮೃತ ಲಾ ವಿದ್ಯಾರ್ಥಿನಿಯಾಗಿದ್ದು, ಪಿಜ್ಜಾ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಆರೋಪಿಗಳಾದ ಧನುಷ್, ಸೂರ್ಯ ಹಾಗೂ ಮೃತ ಅಮೃತ ಒಂದೇ ಏರಿಯಾದವರಾಗಿದ್ದು, ಓಂ ಶಕ್ತಿ ಮಾಲೆ ಹಾಕುವ ಸಂದರ್ಭದಲ್ಲಿ ಇವರ ಕುಟುಂಬಗಳ ನಡುವೆ ಪರಿಚಯವಾಗಿತ್ತು. ಈ ಪರಿಚಯದ ಹಿನ್ನೆಲೆಯಲ್ಲಿ ಧನುಷ್ ಹಾಗೂ ಅಮೃತ ಪರಸ್ಪರ ಪ್ರೀತಿಸುತ್ತಿದ್ದರು.

 

​ಆದರೆ, ಧನುಷ್ ತನಗೆ ಮೊದಲೇ ಮದುವೆಯಾಗಿ ವಿಚ್ಛೇದನ (ಡೈವೋರ್ಸ್) ಆಗಿರುವ ವಿಷಯ ಹಾಗೂ ತನಗೊಂದು ಮಗು ಇರುವ ಸಂಗತಿಯನ್ನು ಅಮೃತಳಿಂದ ಮುಚ್ಚಿಟ್ಟಿದ್ದನು. ಈ ಸತ್ಯ ಇತ್ತೀಚೆಗೆ ತಿಳಿಯುತ್ತಿದ್ದಂತೆ ಅಮೃತ ಆತನಿಂದ ದೂರವಾಗಿದ್ದಳು ಮತ್ತು ಆತನ ಪ್ರೀತಿಯನ್ನು ನಿರಾಕರಿಸಿದ್ದಳು.

 

ತನ್ನ ಅಣ್ಣನ ಪ್ರೀತಿಯನ್ನು ನಿರಾಕರಿಸಿದ ಅಮೃತಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಧನುಷ್ ಸಹೋದರ ಸೂರ್ಯ ಆಕ್ರೋಶಗೊಂಡಿದ್ದನು. ಅದರಂತೆ ಜುಲೈ 13ರಂದು ಸಂಜೆ ಯುವತಿಯ ಮನೆಯ ಬಳಿ ತೆರಳಿ ಗಲಾಟೆ ಮಾಡಿದ್ದಲ್ಲದೆ, ನಡುರಸ್ತೆಯಲ್ಲೇ ಅಮೃತಳ ಬೆನ್ನು ಹಾಗೂ ಎದೆಗೆ ಚಾಕುವಿನಿಂದ ಮನಸೋಇಚ್ಛೆ ಇರಿದು ಅಟ್ಟಹಾಸ ಮೆರೆದಿದ್ದನು.

 

ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ದುರದೃಷ್ಟವಶಾತ್ ಜುಲೈ 15ರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಮೃತಳ ಪ್ರಾಣಪಕ್ಷಿ ಹಾರಿಹೋಗಿದೆ.

​ಘಟನೆಗೆ ಸಂಬಂಧಿಸಿದಂತೆ ಜೀವನಭೀಮಾನಗರ ಪೊಲೀಸ್ ಠಾಣೆಯಲ್ಲಿ ಧನುಷ್ ಮತ್ತು ಸೂರ್ಯ ವಿರುದ್ಧ ಎಫ್.ಐ.ಆರ್ ದಾಖಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಕಟಕಟೆಗೆ ತಳ್ಳಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿ.ವಿ. ರಾಮನ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin