Police Roundup

ಬಿಡದಿಯಲ್ಲಿ ರಾಜಕೀಯ ಹೈಡ್ರಾಮಾ: ಟೌನ್‌ಶಿಪ್ ವಿರೋಧಿ ಹೋರಾಟಕ್ಕೆ ‘ಪೋಸ್ಟರ್ ವಾರ್’ ಟ್ವಿಸ್ಟ್!

Share News

ಬಿಡದಿ: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಬಿಜೆಪಿ ನಾಯಕರು ಇಂದು ಬಿಡದಿಯಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿರುವ ಬೆನ್ನಲ್ಲೇ, ಅಲ್ಲಿ ಭಾರಿ ರಾಜಕೀಯ ಹೈಡ್ರಾಮಾ ಶುರುವಾಗಿದೆ. ಸಭೆಗೆ ಆಗಮಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧವೇ ಬಿಡದಿಯಾದ್ಯಂತ ರಾತ್ರೋರಾತ್ರಿ ಭಾರಿ ಪೋಸ್ಟರ್ ಕ್ಯಾಂಪೇನ್ ಆರಂಭವಾಗಿದ್ದು, ಸ್ಥಳೀಯವಾಗಿ ತೀವ್ರ ಕುತೂಹಲ ಮತ್ತು ರಾಜಕೀಯ ಸಂಚಲನ ಮೂಡಿಸಿದೆ.

 

ಬಿಡದಿಯ ಮುಖ್ಯ ರಸ್ತೆಯ ಗೋಡೆಗಳಲ್ಲಿ ಮತ್ತು ಪ್ರಮುಖ ವೃತ್ತಗಳಲ್ಲಿ ಸಾಲು ಸಾಲು ಪೋಸ್ಟರ್‌ಗಳು ಪ್ರತ್ಯಕ್ಷವಾಗಿದ್ದು, ಮೈತ್ರಿ ಪಕ್ಷಗಳ ನಾಯಕರನ್ನು ತೀವ್ರವಾಗಿ ಲೇವಡಿ ಮಾಡಲಾಗಿದೆ.

​ಬಿಜೆಪಿ ನಾಯಕರ ವಿರುದ್ಧ ಆಕ್ರೋಶ: ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಪೋಸ್ಟರ್‌ಗಳನ್ನು ಹಾಕಿ ವ್ಯಂಗ್ಯವಾಡಲಾಗಿದೆ.

 

​ಜೆಡಿಎಸ್ ನಾಯಕರನ್ನೂ ಬಿಡದ ಪೋಸ್ಟರ್ ವಾರ್: ಕೇವಲ ಬಿಜೆಪಿ ಮಾತ್ರವಲ್ಲದೆ, ಮೈತ್ರಿ ಪಕ್ಷವಾದ ಜೆಡಿಎಸ್‌ನ ಪ್ರಮುಖ ನಾಯಕರ ವಿರುದ್ಧವೂ ಪೋಸ್ಟರ್‌ಗಳು ರಾಜಾಜಿಸುತ್ತಿವೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ವಿರುದ್ಧವೂ ಪೋಸ್ಟರ್ ಅಭಿಯಾನ ನಡೆಸಿ ಟಾರ್ಗೆಟ್ ಮಾಡಲಾಗಿದೆ.

 

ಒಂದೆಡೆ ಟೌನ್‌ಶಿಪ್ ಯೋಜನೆಯಿಂದ ಸ್ಥಳೀಯರಿಗೆ ಆಗುವ ತೊಂದರೆಗಳ ಕುರಿತು ಜನರ ಅಭಿಪ್ರಾಯ ಸಂಗ್ರಹಿಸಲು ಬಿಜೆಪಿ ನಾಯಕರು ಬಿಡದಿಗೆ ಭೇಟಿ ನೀಡುತ್ತಿದ್ದರೆ, ಇನ್ನೊಂದೆಡೆ ಬಿಡದಿಯ ಪ್ರಮುಖ ರಸ್ತೆಗಳ ಗೋಡೆಗಳ ಮೇಲೆ ನಾಯಕರನ್ನು ಲೇವಡಿ ಮಾಡುವ ಪೋಸ್ಟರ್‌ಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.

 

​ಒಟ್ಟಿನಲ್ಲಿ ಬಿಡದಿ ಟೌನ್‌ಶಿಪ್ ವಿಚಾರವೀಗ ಕೇವಲ ಹೋರಾಟವಾಗಿ ಉಳಿಯದೆ, ರಾಜಕೀಯ ಪಕ್ಷಗಳ ನಡುವಿನ ತೀವ್ರ ‘ಪೋಸ್ಟರ್ ಯುದ್ಧ’ಕ್ಕೆ ಸಾಕ್ಷಿಯಾಗಿದೆ. ಈ ಪೋಸ್ಟರ್‌ಗಳ ಹಿಂದೆ ಯಾರ ಕೈವಾಡವಿದೆ? ಮತ್ತು ಇಂದಿನ ಅಭಿಪ್ರಾಯ ಸಂಗ್ರಹ ಸಭೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin