Police Roundup

ಕಾಂಪೌಂಡ್ ಗೋಡೆ, ಗೇಟ್ ಕುಸಿದು 5 ವರ್ಷದ ಬಾಲಕ ದುರ್ಮರಣ; ಮತ್ತೊಬ್ಬ ಬಾಲಕಿ ಸ್ಥಿತಿ ಗಂಭೀರ

Share News

ಆಟವಾಡುತ್ತಿದ್ದ ಮಕ್ಕಳ ಮೇಲೆ ಮನೆಯ ಕಾಂಪೌಂಡ್ ಗೋಡೆ ಹಾಗೂ ಕಬ್ಬಿಣದ ಗೇಟ್ ಏಕಾಏಕಿ ಕುಸಿದು ಬಿದ್ದ ಪರಿಣಾಮ 5 ವರ್ಷದ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಂಡಿಕೊಡಿಗೇಹಳ್ಳಿಯಲ್ಲಿ ಸಂಭವಿಸಿದೆ.

​ಯಾದಗಿರಿ ಮೂಲದ ಅಫೀನ್ (5) ಮೃತಪಟ್ಟ ದುರ್ದೈವಿ ಬಾಲಕ. ಗಂಭೀರವಾಗಿ ಗಾಯಗೊಂಡಿರುವ ಸಮನ್ವಿ ಎಂಬ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

 

ಮೃತ ಬಾಲಕ ಅಫೀನ್ ಕುಟುಂಬವು ಉದ್ಯೋಗದ ನಿಮಿತ್ತ ಯಾದಗಿರಿಯಿಂದ ಬೆಂಗಳೂರಿಗೆ ವಲಸೆ ಬಂದಿತ್ತು. ಕೇವಲ ಐದು ದಿನಗಳ ಹಿಂದಷ್ಟೇ ಬಂಡಿಕೊಡಿಗೇಹಳ್ಳಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಈ ಕುಟುಂಬ ಬಂದಿತ್ತು. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಬುಧವಾರ ಸಂಜೆ ಅಫೀನ್ ಹಾಗೂ ನೆರೆಹೊರೆಯ ಇತರೆ ಮಕ್ಕಳು ಮನೆಯ ಮುಂಭಾಗದಲ್ಲಿ ಎಂದಿನಂತೆ ಆಟವಾಡುತ್ತಿದ್ದರು.

 

ಮಕ್ಕಳು ಆಟದ ಜೋಶ್‌ನಲ್ಲಿ ಕಾಂಪೌಂಡ್‌ನ ಕಬ್ಬಿಣದ ಗೇಟ್ ಹಿಡಿದು ತೂಗಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಗೇಟ್‌ಗೆ ಆಧಾರವಾಗಿದ್ದ ಸಿಮೆಂಟ್ ಕಾಂಪೌಂಡ್ ಗೋಡೆ ಹಾಗೂ ಭಾರೀ ಗಾತ್ರದ ಕಬ್ಬಿಣದ ಗೇಟ್ ಏಕಾಏಕಿ ಮಕ್ಕಳ ಮೇಲೆಯೇ ಕುಸಿದು ಬಿದ್ದಿದೆ. ಗೋಡೆ ಬಿದ್ದ ಭಾರೀ ಶಬ್ದ ಕೇಳಿ ಆತಂಕಗೊಂಡ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮಕ್ಕಳನ್ನು ಹೊರತೆಗೆದಿದ್ದಾರೆ.

 

ತೀವ್ರವಾಗಿ ಗಾಯಗೊಂಡಿದ್ದ ಮಕ್ಕಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ತಲೆ ಹಾಗೂ ದೇಹಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಬಾಲಕ ಅಫೀನ್ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ. ಆಟವಾಡುತ್ತಾ ಕಣ್ಣೆದುರೇ ಇದ್ದ ಮಗು ಶವವಾಗಿ ಮಾರ್ಪಟ್ಟಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

 

​ಘಟನೆಗೆ ಸಂಬಂಧಿಸಿದಂತೆ ಬಾಗಲೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಒಟ್ಟಾರೆ ಮಕ್ಕಳ ಆಟದ ಮಧ್ಯೆ ನಡೆದ ಈ ಘೋರ ದುರಂತ ಇಡೀ ಗ್ರಾಮವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin