Police Roundup

ಹೊನ್ನಾವರದಲ್ಲಿ ಆರ್‌ಟಿಒ ಭರ್ಜರಿ ಕಾರ್ಯಾಚರಣೆ: ಬೃಹತ್ ಕಲ್ಲುಗಳನ್ನು ಸಾಗಿಸುತ್ತಿದ್ದ 17 ಓವರ್ ಲೋಡ್ ಲಾರಿಗಳು ವಶಕ್ಕೆ!

Share News

ಹೊನ್ನಾವರ: ಮಿತಿಗಿಂತ ಹೆಚ್ಚು ಭಾರ (ಓವರ್ ಲೋಡ್) ತುಂಬಿಕೊಂಡು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬರೋಬ್ಬರಿ 17 ಲಾರಿಗಳನ್ನು ಪ್ರಾದೇಶಿಕ ಸಾರಿಗೆ (RTO) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

​ಮಂಗಳೂರಿನ ಪಣಂಬೂರಿನಿಂದ ಹೊನ್ನಾವರದ ಕಡೆಗೆ ಬರುತ್ತಿದ್ದ ಈ ವಾಹನಗಳನ್ನು ಮಾರ್ಗಮಧ್ಯೆ ತಡೆದ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದಾಗ ಈ ನಿಯಮ ಬಾಹಿರ ಓವರ್ ಲೋಡ್ ಸಾಗಾಟದ ಅಕ್ರಮ ಬೆಳಕಿಗೆ ಬಂದಿದೆ.

 

ವಶಪಡಿಸಿಕೊಂಡ ಎಲ್ಲಾ 17 ವಾಹನಗಳಲ್ಲಿ ಭಾರಿ ಗಾತ್ರದ ಶಿಲೆ ಕಲ್ಲುಗಳನ್ನು ನಿಗದಿತ ಮಿತಿಗಿಂತ ಅತ್ಯಂತ ಅಧಿಕವಾಗಿ ತುಂಬಿಕೊಂಡು ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿಯಾಗಿ ಸಾಗಿಸಲಾಗುತ್ತಿತ್ತು. ಮೂಲಗಳ ಪ್ರಕಾರ, ಹೊನ್ನಾವರದ ಕಾಸರಕೋಡದಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ವಾಣಿಜ್ಯ ಬಂದರು ವಿಸ್ತರಣೆ ಮತ್ತು ನಿರ್ಮಾಣ ಕಾಮಗಾರಿಗೆ ಬಳಸಲು ಈ ಬೃಹತ್ ಕಲ್ಲುಗಳನ್ನು ಮಂಗಳೂರಿನಿಂದ ತರಲಾಗುತ್ತಿತ್ತು ಎಂಬ ನಿಖರ ಮಾಹಿತಿ ಲಭ್ಯವಾಗಿದೆ.

 

ಈ ಬೃಹತ್ ಕಲ್ಲುಗಳನ್ನು ಹೊತ್ತ ಲಾರಿಗಳು ಯಾವುದೇ ಮುನ್ನೆಚ್ಚರಿಕೆ ಇಲ್ಲದೆ, ಅತಿಯಾದ ವೇಗ ಮತ್ತು ಮಿತಿಮೀರಿದ ಭಾರದೊಂದಿಗೆ ಸಂಚರಿಸುತ್ತಿರುವುದರಿಂದ ಹೆದ್ದಾರಿಯ ಇತರ ವಾಹನ ಸವಾರರು ಹಾಗೂ ಸಾರ್ವಜನಿಕರ ಜೀವಕ್ಕೆ ತೀವ್ರ ಆಪತ್ತು ಎದುರಾಗಿತ್ತು. ಅಲ್ಲದೆ, ಓವರ್ ಲೋಡ್ ವಾಹನಗಳ ಸಂಚಾರದಿಂದಾಗಿ ರಸ್ತೆಗಳು ಸಹ ಜಖಂಗೊಳ್ಳುತ್ತಿದ್ದವು. ಈ ಬಗ್ಗೆ ಸಾರ್ವಜನಿಕ ವಲಯದಿಂದ ವ್ಯಾಪಕ ದೂರುಗಳು ಕೇಳಿಬಂದಿದ್ದವು.

 

ಸಾರ್ವಜನಿಕ ರಸ್ತೆಗಳಲ್ಲಿ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಬೃಹತ್ ಗಾತ್ರದ ಕಲ್ಲುಗಳನ್ನು ಸಾಗಿಸುತ್ತಿದ್ದ ಕಾರಣಕ್ಕೆ ಆರ್‌ಟಿಒ ಅಧಿಕಾರಿಗಳು ಈ ಕಠಿಣ ಕ್ರಮ ಕೈಗೊಂಡಿದ್ದಾರೆ. ಸದ್ಯ ಕಾರ್ಯಾಚರಣೆ ವೇಳೆ ಜಪ್ತಿ ಮಾಡಲಾದ ಎಲ್ಲಾ 17 ವಾಹನಗಳನ್ನು ಹೊನ್ನಾವರ ಪೊಲೀಸ್ ಮೈದಾನದಲ್ಲಿ ಸುರಕ್ಷಿತವಾಗಿ ನಿಲ್ಲಿಸಲಾಗಿದ್ದು, ನಿಯಮ ಉಲ್ಲಂಘಿಸಿದ ವಾಹನ ಮಾಲೀಕರಿಗೆ ಭಾರಿ ದಂಡ ವಿಧಿಸಲು ಅಧಿಕಾರಿಗಳು ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin