ಜ್ಯಾಮರ್ ಕಾಟಕ್ಕೆ ಬೇಸತ್ತ ಹಳ್ಳಿಜನರು..!
ಕಲಬುರಗಿ: ಕೇಂದ್ರ ಕಾರಾಗೃಹದ ಭದ್ರತೆಗಾಗಿ ಅಳವಡಿಸಿರುವ ನೆಟ್‌ವರ್ಕ್ ಜ್ಯಾಮರ್ ಇದೀಗ ಜೈಲಿನ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ ಎಂಬ ಆರೋಪ ಕೇಳಿಬಂದಿದೆ.
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜ್ಯಾಮರ್‌ನ ವ್ಯಾಪ್ತಿ ಹೆಚ್ಚಳದಿಂದ ಸಿತನೂರು, ನಂದಿಕೂರು, ಪಾಣೆಗಾಂವ್, ಶಿರನೂರು, ಖಣದಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೊಬೈಲ್ ನೆಟ್‌ವರ್ಕ್ ಹಾಗೂ ಇಂಟರ್‌ನೆಟ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಜ್ಯಾಮರ್‌ನ ಪರಿಣಾಮವಾಗಿ ಮೊಬೈಲ್ ಕರೆಗಳು ಸರಿಯಾಗಿ ಸಂಪರ್ಕವಾಗದೆ, ಮಾತನಾಡುವ ಸಂದರ್ಭದಲ್ಲೇ ಕರೆ ಕಡಿತಗೊಳ್ಳುವುದು, ನೆಟ್‌ವರ್ಕ್ ಲಭ್ಯವಿಲ್ಲದಿರುವುದು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ ಎನ್ನಲಾಗಿದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ಕುಟುಂಬಸ್ಥರು ಹಾಗೂ ಸಂಬಂಧಿಕರನ್ನು ಸಂಪರ್ಕಿಸುವುದಕ್ಕೂ ಗ್ರಾಮಸ್ಥರು ಪರದಾಡುವಂತಾಗಿದೆ.
ಇಷ್ಟೇ ಅಲ್ಲದೆ, ಗೂಗಲ್ ಪೇ, ಫೋನ್‌ಪೇ ಸೇರಿದಂತೆ ಆನ್‌ಲೈನ್ ಹಣಕಾಸು ವ್ಯವಹಾರಗಳಿಗೂ ನೆಟ್‌ವರ್ಕ್ ಸಮಸ್ಯೆ ಅಡ್ಡಿಯಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಹೆಚ್ಚಾಗಿ ಬಳಕೆಯಾಗುತ್ತಿರುವ ಸಂದರ್ಭದಲ್ಲಿ ಜ್ಯಾಮರ್‌ನಿಂದಾಗಿ ಸಣ್ಣಪುಟ್ಟ ವ್ಯವಹಾರಗಳಿಗೂ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮನವಿ ಮಾಡಿದರೂ ಪರಿಹಾರವಿಲ್ಲ?
ಜೈಲಿನ ಭದ್ರತೆಯ ದೃಷ್ಟಿಯಿಂದ ಜ್ಯಾಮರ್ ಅಗತ್ಯವಿದ್ದರೂ, ಅದರ ವ್ಯಾಪ್ತಿ ಜೈಲು ಆವರಣಕ್ಕೆ ಸೀಮಿತವಾಗುವಂತೆ ವೈಜ್ಞಾನಿಕ ಹಾಗೂ ತಾಂತ್ರಿಕ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಈ ಸಮಸ್ಯೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ಹಲವು ಬಾರಿ ತರಲಾಗಿದೆ. ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರೂ ಇದುವರೆಗೆ ಸಮಸ್ಯೆ ಬಗೆಹರಿದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
“ಜೈಲಿನ ಭದ್ರತೆ ಮುಖ್ಯ. ಆದರೆ ಅದಕ್ಕಾಗಿ ಸುತ್ತಮುತ್ತಲಿನ ಗ್ರಾಮಗಳ ಜನರ ಮೂಲಭೂತ ಸಂಪರ್ಕ ವ್ಯವಸ್ಥೆಯೇ ಅಸ್ತವ್ಯಸ್ತವಾಗಬಾರದು. ಜ್ಯಾಮರ್‌ನ ತಾಂತ್ರಿಕ ವ್ಯಾಪ್ತಿಯನ್ನು ಪರಿಶೀಲಿಸಿ, ಗ್ರಾಮಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು” ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಜೈಲಿನ ಭದ್ರತೆ ಮತ್ತು ಸಾರ್ವಜನಿಕರ ಸಂಪರ್ಕ ವ್ಯವಸ್ಥೆ—ಇವೆರಡನ್ನೂ ಸಮತೋಲನಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ತಕ್ಷಣ ತಾಂತ್ರಿಕ ಪರಿಶೀಲನೆ ನಡೆಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಆಗ್ರಹ ಗ್ರಾಮಸ್ಥರಿಂದ ಕೇಳಿಬಂದಿದೆ.
ವರದಿ: ಗುಂಡು ಕುಲಕರ್ಣಿ,
ವಿಜಯಪುರ _ ಕಲಬುರಗಿ