ಮೈಸೂರು: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಜಾಲದ ವಿರುದ್ಧ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಂದಾಜು 1.60 ಕೋಟಿ ರೂಪಾಯಿ ಮೌಲ್ಯದ 280 ಕೆ.ಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಈ ಜಾಲದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಮದ್ ಜುಬೇರ್, ಮುದಾಸಿರ್ ಅಹಮದ್, ಅಬೂಬಕರ್ ಸಿದ್ದಿಕ್ ಹಾಗೂ ಸೈಯದ್ ಮಜಾರ್ ಬಂಧಿತ ಆರೋಪಿಗಳಾಗಿದ್ದಾರೆ.
ಮೈಸೂರಿನಲ್ಲಿ ಡ್ರಗ್ಸ್ ದಂಧೆಗೆ ಬ್ರೇಕ್ ಹಾಕಲು ಸಮರ ಸಾರಿರುವ ಸಿಸಿಬಿ ಪೊಲೀಸರಿಗೆ, ಬೃಹತ್ ಪ್ರಮಾಣದಲ್ಲಿ ಗಾಂಜಾ ಸಾಗಾಟವಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅಲರ್ಟ್ ಆದ ಸಿಸಿಬಿ ಪೊಲೀಸ್ ತಂಡ, ಬನ್ನೂರು ಚೆಕ್‌ಪೋಸ್ಟ್ ಬಳಿ ತೀವ್ರ ನಿಗಾ ವಹಿಸಿ ಜಂಟಿ ಕಾರ್ಯಾಚರಣೆ ಕೈಗೊಂಡಿತ್ತು.
ಈ ವೇಳೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 280 ಕೆ.ಜಿ ತೂಕದ ಗಾಂಜಾ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ. ಇದರ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು 1.60 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಗಾಂಜಾ ಸಾಗಾಟ ಮಾಡಲು ಆರೋಪಿಗಳು ಬಳಸುತ್ತಿದ್ದ ಒಂದು ಕಾರು ಹಾಗೂ ಒಂದು ಟ್ರಕ್ (ಲಾರಿ) ಅನ್ನು ಪೊಲೀಸರು ಸ್ಥಳದಲ್ಲೇ ಜಪ್ತಿ ಮಾಡಿದ್ದಾರೆ. ಸದ್ಯ ಬಂಧಿತ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಈ ಮಾದಕ ಜಾಲದ ಹಿಂದೆ ಬೇರೆ ಯಾರಿದ್ದಾರೆ? ಈ ಗಾಂಜಾವನ್ನು ಎಲ್ಲಿಂದ ತರಲಾಗುತ್ತಿತ್ತು ಮತ್ತು ಯಾರಿಗೆ ತಲುಪಿಸಲು ಸ್ಕೆಚ್ ಹಾಕಲಾಗಿತ್ತು ಎಂಬ ಬಗ್ಗೆ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.