Police Roundup

ವಾಣಿಜ್ಯ ನಗರಿ ರಾಣೇಬೆನ್ನೂರಿಗೆ ಪೂರ್ವ ವಲಯ ಐಜಿಪಿ ಡಾ. ಬಿ. ಆರ್. ರವಿಕಾಂತೇಗೌಡ ಭೇಟಿ: ಹೆಚ್ಚುವರಿ ಪೊಲೀಸ್ ಠಾಣೆಗೆ ಸಾರ್ವಜನಿಕರ ಒತ್ತಾಯ, ರೈತ ಸಂಘದಿಂದ ಸನ್ಮಾನ!

Share News

ರಾಣೇಬೆನ್ನೂರು: ದಿನದಿಂದ ದಿನಕ್ಕೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೂ ಹಾವೇರಿ ಜಿಲ್ಲೆಯಲ್ಲೇ ದೊಡ್ಡ ವ್ಯಾಪಾರ ಕೇಂದ್ರವಾಗಿರುವ ವಾಣಿಜ್ಯ ನಗರಿ ರಾಣೇಬೆನ್ನೂರಿನ ನಾಗರಿಕರ ಸುರಕ್ಷತೆಗಾಗಿ ನಗರಕ್ಕೆ ಮತ್ತೊಂದು ಹೆಚ್ಚುವರಿ ಪೊಲೀಸ್ ಠಾಣೆಯ ಅಗತ್ಯವಿದೆ. ಈ ಕೂಡಲೇ ಹೊಸ ಠಾಣೆಯನ್ನು ಮಂಜೂರು ಮಾಡಿಕೊಡಬೇಕು ಎಂದು ರೈತರು, ವರ್ತಕರು, ಉದ್ಯಮಿಗಳು, ಕಾರ್ಮಿಕರು ಹಾಗೂ ನಾಗರಿಕರು ಪೂರ್ವ ವಲಯದ ಐಜಿಪಿ ಡಾ. ಬಿ. ಆರ್. ರವಿಕಾಂತೇಗೌಡ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

 

​ಇಲ್ಲಿನ ಪೊಲೀಸ್ ಠಾಣೆಗೆ ಐಜಿಪಿ ಡಾ. ಬಿ. ಆರ್. ರವಿಕಾಂತೇಗೌಡ ಅವರು ಭೇಟಿ ನೀಡಿದ ಸಂದರ್ಭದಲ್ಲಿ ರೈತ ಸಂಘಟನೆಗಳು, ಆಟೋ ಚಾಲಕ-ಮಾಲೀಕರ ಸಂಘ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ಬೇಡಿಕೆಗಳ ಮನವಿ ಪತ್ರವನ್ನು ಹಸ್ತಾಂತರಿಸಿದರು.

 

ಸಾರ್ವಜನಿಕರಿಂದ ಮನವಿ ಸ್ವೀಕರಿಸಿ ಮಾತನಾಡಿದ ಪೂರ್ವ ವಲಯದ ಐಜಿಪಿ ಡಾ. ಬಿ. ಆರ್. ರವಿಕಾಂತೇಗೌಡ ಅವರು, “ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಯಶೋಧಾ ಒಂಟಗೋಡಿ ಅವರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ತಂಡವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಾ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿದೆ. ಹಾವೇರಿ ಜಿಲ್ಲೆಯಲ್ಲಿಯೇ ರಾಣೇಬೆನ್ನೂರು ಅತ್ಯಂತ ದೊಡ್ಡ ಮತ್ತು ಪ್ರಮುಖ ವಾಣಿಜ್ಯ ನಗರ ಎಂಬುದನ್ನು ನಾವು ಗಮನಿಸಿದ್ದೇವೆ” ಎಂದರು.

 

​ಮುಂದುವರಿದು ಮಾತನಾಡಿದ ಅವರು, ನಗರದ ಜನಸಂಖ್ಯೆ ಮತ್ತು ಬೆಳವಣಿಗೆಗೆ ಅನುಗುಣವಾಗಿ ಹೆಚ್ಚುವರಿ ಪೊಲೀಸ್ ಠಾಣೆಯ ಅವಶ್ಯಕತೆ ಇರುವುದು ಮನವರಿಕೆಯಾಗಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಇಲಾಖೆಯ ವತಿಯಿಂದ ಆದಷ್ಟು ಬೇಗನೆ ಮತ್ತೊಂದು ಪೊಲೀಸ್ ಠಾಣೆ ಮಂಜೂರಾತಿ ಸಿಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

 

ಮನವಿ ಸಲ್ಲಿಸಿ ಮಾತನಾಡಿದ ರೈತಪರ ಸಂಘಟನೆಯ ಅಧ್ಯಕ್ಷ ರವೀಂದ್ರಗೌಡ ಪಾಟೀಲ್ ಅವರು, “ರಾಣೇಬೆನ್ನೂರು ನಗರದ ಭವಿಷ್ಯದ ದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಕಳೆದ 15 ವರ್ಷಗಳ ಹಿಂದೆಯೇ ಮುಂದಾಲೋಚನೆಯಿಂದ ಹೆಚ್ಚುವರಿ ಪೊಲೀಸ್ ಠಾಣೆಗಾಗಿ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಇಷ್ಟು ವರ್ಷಗಳಾದರೂ ಈ ಬೇಡಿಕೆ ಈಡೇರಿಲ್ಲ. ಈಗಲಾದರೂ ಐಜಿಪಿಯವರು ವಿಶೇಷ ಆಸಕ್ತಿ ವಹಿಸಿ ವಾಣಿಜ್ಯ ನಗರಕ್ಕೆ ಹೊಸ ಠಾಣೆ ಮಂಜೂರು ಮಾಡಿಸಿಕೊಡಬೇಕು” ಎಂದು ಆಗ್ರಹಿಸಿದರು.

​ಈ ಸಂದರ್ಭದಲ್ಲಿ ನಗರದ ಪ್ರಮುಖ ವರ್ತಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಆಟೋ ಚಾಲಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin