Skip to main content

Police Roundup

ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ: ವಾಹಕ ಜನ್ಯ ಸೋಂಕು ತಡೆಗಟ್ಟಲು ಸ್ವಚ್ಛತೆ ಕಾಪಾಡಿ – ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ

Share News

ಶಿವಮೊಗ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಗಸ್ಟ್ 10 ರಂದು ಜಿಲ್ಲಾದ್ಯಂತ ‘ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, 1 ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

 

​ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ರಾಷ್ಟ್ರೀಯ ಜಂತು ಹುಳು ನಿವಾರಣೆ ದಿನ’ದ ಪೂರ್ವಭಾವಿ ಹಾಗೂ ‘ರಾಷ್ಟ್ರೀಯ ವಾಹಕಗಳಿಂದ ಹರಡುವ ರೋಗ ನಿಯಂತ್ರಣ ಕಾರ್ಯಕ್ರಮ’ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಂತು ಹುಳುಗಳ ಸೋಂಕಿನಿಂದ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ ಹಾಗೂ ಕಲಿಕೆಯಲ್ಲಿ ಹಿಂದುಳಿಯುವಿಕೆ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಇದನ್ನು ತಡೆಗಟ್ಟಲು 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಆಲ್ಬೆಂಡಜೋಲ್ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುವುದು.

 

ಆಗಸ್ಟ್ 10 ರಂದು ಎಲ್ಲಾ ಅಂಗನವಾಡಿಗಳು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಶಿಕ್ಷಕರು ಮಾತ್ರೆ ವಿತರಿಸಲಿದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆಶಾ ಕಾರ್ಯಕರ್ತೆಯರು ಮನೆ ಭೇಟಿ ನೀಡಿ ಮಾತ್ರೆ ನೀಡಲಿದ್ದಾರೆ. ಆಗಸ್ಟ್ 10 ರಂದು ಮಾತ್ರೆ ಪಡೆಯಲು ಬಿಟ್ಟುಹೋದ ಫಲಾನುಭವಿಗಳಿಗೆ ಆಗಸ್ಟ್ 17 ರಂದು ನಡೆಯುವ ‘ಮೋಪ್-ಅಪ್ ರೌಂಡ್’ನಲ್ಲಿ ಮಾತ್ರೆ ನೀಡಲಾಗುವುದು ಎಂದು ತಿಳಿಸಿದರು.

ಆರ್‌ಸಿಹೆಚ್‌ಓ ಡಾ. ಓ. ಮಲ್ಲಪ್ಪ ಮಾತನಾಡಿ, “2015 ರಲ್ಲಿ ಕರ್ನಾಟಕದಲ್ಲಿ ಶೇ. 49 ರಷ್ಟಿದ್ದ ಜಂತು ಹುಳು ಬಾಧೆ, ನಿರಂತರ ಮಾತ್ರೆ ವಿತರಣೆಯಿಂದಾಗಿ ಪ್ರಸ್ತುತ ಶೇ. 0.22 ಕ್ಕೆ ಇಳಿಕೆಯಾಗಿದೆ. 2026-27ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 4,17,565 ಮಕ್ಕಳು ನೋಂದಣಿಯಾಗಿದ್ದಾರೆ” ಎಂದರು.

 

ವೈಯಕ್ತಿಕ ಸ್ವಚ್ಛತೆ ಕಾಪಾಡುವುದು, ಕಾಲಕಾಲಕ್ಕೆ ಉಗುರು ಕತ್ತರಿಸುವುದು, ಕಡ್ಡಾಯವಾಗಿ ಶೌಚಾಲಯ ಬಳಸುವುದು, ಕಾಲಿಗೆ ಚಪ್ಪಲಿ ಧರಿಸುವುದು ಹಾಗೂ ಶೌಚಾಲಯ ಬಳಕೆಯ ನಂತರ ಮತ್ತು ಊಟಕ್ಕೆ ಮೊದಲು ಸೋಪಿನಿಂದ ಕೈ ತೊಳೆಯುವುದರಿಂದ ಜಂತು ಹುಳು ಸೋಂಕನ್ನು ತಡೆಗಟ್ಟಬಹುದು ಎಂದು ಅವರು ವಿವರಿಸಿದರು.

ಸೊಳ್ಳೆಗಳಿಂದ ಹರಡುವ ಡೆಂಗ್ಯು, ಚಿಕುನ್ ಗುನ್ಯ ಹಾಗೂ ಮಲೇರಿಯಾ ರೋಗಗಳನ್ನು ತಡೆಗಟ್ಟಲು ಸಾರ್ವಜನಿಕರು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರೂ ವಾರಕ್ಕೊಮ್ಮೆ ‘ಡ್ರೈ ಡೇ’ ಆಚರಿಸಬೇಕು ಹಾಗೂ ತೀವ್ರ ಜ್ವರ ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

 

​ಎನ್‌ವಿಬಿಡಿಸಿಪಿ ಅಧಿಕಾರಿ ಡಾ. ಗುಡದಪ್ಪ ಕಸಬಿ ಮಾತನಾಡಿ, ಜನವರಿಯಿಂದ ಜುಲೈವರೆಗೆ ಜಿಲ್ಲೆಯಲ್ಲಿ ನಡೆಸಿದ ಪರೀಕ್ಷೆಗಳಲ್ಲಿ 59 ಡೆಂಗ್ಯು, 26 ಚಿಕುನ್‌ಗುನ್ಯ ಹಾಗೂ 12 ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ. ರೋಗ ನಿಯಂತ್ರಣಕ್ಕಾಗಿ ಇಲಾಖೆಯಿಂದ ಮನೆ ಮನೆ ಲಾರ್ವಾ ಸಮೀಕ್ಷೆ ನಡೆಯುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.

 

​ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಡಿಹೆಚ್‌ಓ ಡಾ. ನಟರಾಜ್, ಡಿಎಸ್‌ಓ ಡಾ. ನಾಗರಾಜ್ ನಾಯ್ಕ್, ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin