ಬೆಂಗಳೂರು: ದೇಶದ ಕೃಷಿ ಮತ್ತು ಆರ್ಥಿಕತೆಯ ಜೀವನಾಡಿಯಾಗಿರುವ ಮುಂಗಾರು ಮಾರುತಗಳು (Monsoon) ಈ ಬಾರಿ ನಿಗದಿತ ಸಮಯಕ್ಕಿಂತ ಒಂದು ವಾರ ಮೊದಲೇ ಅಂಡಮಾನ್ ದ್ವೀಪಗಳನ್ನು ಪ್ರವೇಶಿಸಲಿದೆ. ವಾಡಿಕೆಯಂತೆ ಮೇ 22ಕ್ಕೆ ಆರಂಭವಾಗಬೇಕಿದ್ದ ಮಳೆಗಾಲದ ಪ್ರಕ್ರಿಯೆ, ಈ ಬಾರಿ ಮೇ 17ರಂದೇ ಚಾಲನೆ ಪಡೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಬಂಗಾಳದ ಉಪಸಾಗರ, ಅಂಡಮಾನ್ ಸಮುದ್ರ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಿಗೆ ಮುಂಗಾರು ಮಾರುತಗಳು ಈ ವಾರದ ಕೊನೆಯಲ್ಲಿ (ಮೇ 17) ಅಪ್ಪಳಿಸಲಿವೆ. ಇದು ಸಾಮಾನ್ಯ ವೇಳಾಪಟ್ಟಿಗಿಂತ ಸುಮಾರು 5 ರಿಂದ 6 ದಿನ ಮುಂಚಿತವಾಗಿ ಆಗಮಿಸುತ್ತಿರುವುದು ವಿಶೇಷವಾಗಿದೆ. ಇದರಿಂದಾಗಿ ಈ ಬಾರಿ ನಾಲ್ಕು ತಿಂಗಳ ಸುದೀರ್ಘ ಮಳೆಗಾಲವು ಶೀಘ್ರವಾಗಿ ಆರಂಭವಾಗಲಿದೆ.
ಸಾಮಾನ್ಯವಾಗಿ ಜೂನ್ 1ರಂದು ಕೇರಳ ಕರಾವಳಿಗೆ ಅಪ್ಪಳಿಸುವ ಮುಂಗಾರು, ಈ ಬಾರಿ ಮೇ ಕೊನೆಯ ವಾರದಲ್ಲೇ (ಮೇ 25 ರಿಂದ ಜೂನ್ 1ರ ಒಳಗೆ) ಪ್ರವೇಶಿಸುವ ಸಾಧ್ಯತೆ ಇದೆ ಎಂದು ಯುರೋಪ್ ಹವಾಮಾನ ಮುನ್ಸೂಚನೆ ಕೇಂದ್ರ ತಿಳಿಸಿದೆ. ದಕ್ಷಿಣ-ಪೂರ್ವ ಅರಬ್ಬೀ ಸಮುದ್ರದಲ್ಲಿ ಬಲವಾದ ಗಾಳಿ ಬೀಸುತ್ತಿರುವುದು ಮಾನ್ಸೂನ್ ಮಾರುತಗಳ ಚಲನೆಗೆ ಪೂರಕವಾದ ವಾತಾವರಣ ನಿರ್ಮಿಸಿದೆ.
ಕಳೆದ ಕೆಲವು ತಿಂಗಳಿಂದ ತೀವ್ರ ಬಿಸಿಲಿನ ಬೇಗೆ ಮತ್ತು ನೀರಿನ ಅಭಾವದಿಂದ ಕಂಗೆಟ್ಟಿರುವ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಈ ಸುದ್ದಿ ಭಾರಿ ನೆಮ್ಮದಿ ತಂದಿದೆ. ಮೇ ಅಂತ್ಯದ ವೇಳೆಗೆ ಮಳೆಗಾಲ ಆರಂಭವಾದರೆ, ಕೃಷಿ ಚಟುವಟಿಕೆಗಳಿಗೆ ವೇಗ ದೊರೆಯುವುದಲ್ಲದೆ ಬಿಸಿಲಿನ ತಾಪಮಾನವೂ ಗಣನೀಯವಾಗಿ ಇಳಿಕೆಯಾಗಲಿದೆ.