ಮನೆಯಲ್ಲಿ ಪ್ರಮುಖ ಗ್ಯಾಜೆಟ್‌ಗಳನ್ನು ಆಫ್ ಮಾಡಿದ ಮೇಲೂ ವಿದ್ಯುತ್ ಬಿಲ್ ಹೆಚ್ಚಾಗುತ್ತಿದೆಯೇ? ಹಾಗಿದ್ದರೆ ಅದಕ್ಕೊಂದು ಮುಖ್ಯ ಕಾರಣವಿದೆ. ಮನೆಯಲ್ಲಿ ಟಿವಿ, ಮೊಬೈಲ್ ಚಾರ್ಜರ್ ಅಥವಾ ಸೆಟ್-ಟಾಪ್ ಬಾಕ್ಸ್‌ಗಳಂತಹ ಉಪಕರಣಗಳನ್ನು ಕೇವಲ ರಿಮೋಟ್ ಮೂಲಕ ಆಫ್ ಮಾಡಿದಾಗ, ಅವು ಸಂಪೂರ್ಣವಾಗಿ ಬಂದ್ ಆಗದೆ ‘ಸ್ಟ್ಯಾಂಡ್‌ಬೈ ಮೋಡ್’ (Standby Mode) ನಲ್ಲೇ ಉಳಿಯುತ್ತವೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ಕಡಿತಗೊಳಿಸಲು ಪವರ್ ಕಾರ್ಪೊರೇಷನ್ ಇಲಾಖೆಯು ಟ್ವೀಟ್ ಮೂಲಕ ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ಮತ್ತು ಸರಳ ಟಿಪ್ಸ್ ನೀಡಿದೆ.
ಮನೆಯ ಅನೇಕ ಉಪಕರಣಗಳು ಮೇಲ್ನೋಟಕ್ಕೆ “ಆಫ್” ಆಗಿರುವಂತೆ ಕಂಡುಬಂದರೂ ಸಹ, ಹಿನ್ನೆಲೆಯಲ್ಲಿ ನಿರಂತರವಾಗಿ ವಿದ್ಯುತ್ ಬಳಸುತ್ತಿರುತ್ತವೆ. ಸಾಧನಗಳನ್ನು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಬಿಡದೆ, ಮುಖ್ಯ ಪವರ್ ಸ್ವಿಚ್‌ನಿಂದಲೇ ಸಂಪೂರ್ಣವಾಗಿ ಬಂದ್ ಮಾಡುವ ಸಣ್ಣ ಅಭ್ಯಾಸದಿಂದ ಹೆಚ್ಚಿನ ಕರೆಂಟ್ ಬಿಲ್ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಇಲಾಖೆ ತಿಳಿಸಿದೆ.
ನಿರಂತರ ವಿದ್ಯುತ್ ವ್ಯಯಿಸುವ ಆ 6 ಪ್ರಮುಖ ಉಪಕರಣಗಳು ಮತ್ತು ಜಾಗೃತಿ ಕ್ರಮಗಳು ಇಲ್ಲಿವೆ:
ಟೆಲಿವಿಷನ್ (TV): ಟಿವಿಯನ್ನು ಕೇವಲ ರಿಮೋಟ್ ಬಳಸಿ ಆಫ್ ಮಾಡಿದರೆ ಪರದೆ ಕತ್ತಲಾಗುತ್ತದೆಯೇ ಹೊರತು ವಿದ್ಯುತ್ ಬಳಕೆ ನಿಲ್ಲುವುದಿಲ್ಲ. ಆದ್ದರಿಂದ ಯಾವಾಗಲೂ ಮುಖ್ಯ ಪವರ್ ಸ್ವಿಚ್ ಆಫ್ ಮಾಡುವುದನ್ನು ರೂಢಿಸಿಕೊಳ್ಳಿ.
ಸೆಟ್-ಟಾಪ್ ಬಾಕ್ಸ್: ಟಿವಿಗಳಂತೆಯೇ ಸೆಟ್-ಟಾಪ್ ಬಾಕ್ಸ್‌ಗಳು ಕೂಡ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಅಧಿಕ ವಿದ್ಯುತ್ ಬಳಸುವುದರಿಂದ, ಇವುಗಳನ್ನೂ ಮುಖ್ಯ ಸ್ವಿಚ್‌ನಿಂದಲೇ ಆಫ್ ಮಾಡುವುದು ಸೂಕ್ತ.
ಮೊಬೈಲ್ ಚಾರ್ಜರ್: ಮೊಬೈಲ್ ಚಾರ್ಜ್ ಆದ ನಂತರವೂ ಚಾರ್ಜರ್ ಅನ್ನು ಸಾಕೆಟ್‌ನಲ್ಲಿ ಹಾಗೆಯೇ ಬಿಟ್ಟರೆ, ಅದು ಯಾವುದೇ ಸಾಧನಕ್ಕೆ ಸಂಪರ್ಕವಿಲ್ಲದಿದ್ದರೂ ವಿದ್ಯುತ್ ಬಳಸುತ್ತಲೇ ಇರುತ್ತದೆ. ಆದ್ದರಿಂದ ಚಾರ್ಜಿಂಗ್ ಮುಗಿದ ತಕ್ಷಣ ಅನ್‌ಪ್ಲಗ್ ಮಾಡಿ.
ಏರ್ ಕಂಡೀಷನರ್ (AC): ರಿಮೋಟ್‌ನಿಂದ ಎಸಿ ಆಫ್ ಮಾಡಿದಾಗ ಅದರ ಆಂತರಿಕ ಸರ್ಕ್ಯೂಟ್‌ಗಳು ಚಾಲನೆಯಲ್ಲಿರುತ್ತವೆ. ಆದ್ದರಿಂದ ಯಾವಾಗಲೂ ಮುಖ್ಯ ಪವರ್ ಸ್ವಿಚ್‌ನಿಂದಲೇ ಎಸಿಯನ್ನು ಆಫ್ ಮಾಡಿ.
ವೈ-ಫೈ ರೂಟರ್ (Wi-Fi Router): ಸಾಮಾನ್ಯವಾಗಿ ಜನರು ವೈ-ಫೈ ರೂಟರ್ ಅನ್ನು ಯಾವಾಗಲೂ ಆನ್ ಇಡುತ್ತಾರೆ. ಆದರೆ ರಾತ್ರಿ ಮಲಗುವ ಮುನ್ನ ಅಥವಾ ಮನೆಯಿಂದ ಹೊರಡುವಾಗ ಇದನ್ನು ಆಫ್ ಮಾಡುವ ಅಭ್ಯಾಸ ಮಾಡಿಕೊಳ್ಳಿ.
RO ವಾಟರ್ ಪ್ಯೂರಿಫೈಯರ್: ಮನೆಯಲ್ಲಿರುವ RO ಟ್ಯಾಂಕ್ ತುಂಬಿದ ತಕ್ಷಣ ಅದರ ಮುಖ್ಯ ಸ್ವಿಚ್ ಆಫ್ ಮಾಡುವುದರಿಂದ ಅನಗತ್ಯ ವಿದ್ಯುತ್ ಬಳಕೆಯನ್ನು ಸುಲಭವಾಗಿ ತಡೆಯಬಹುದು.
“ಉಪಕರಣಗಳನ್ನು ರಿಮೋಟ್‌ನಿಂದ ಆಫ್ ಮಾಡುವ ಬದಲು, ನೇರವಾಗಿ ಮುಖ್ಯ ಪ್ಲಗ್ ಬೋರ್ಡ್‌ನ ಸ್ವಿಚ್ ಆಫ್ ಮಾಡುವುದರಿಂದ ಪ್ರತಿ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಗಣನೀಯ ಪ್ರಮಾಣದ ಉಳಿತಾಯ ಮಾಡಬಹುದು.”