ನವದೆಹಲಿ/ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಹೈಡ್ರಾಮಾ ಇದೀಗ ಅತ್ಯಂತ ರೋಚಕ ತಿರುವು ಪಡೆದುಕೊಂಡಿದೆ. ದೆಹಲಿಯಲ್ಲಿ ನಡೆದ ಹೈಕಮಾಂಡ್ ಸಭೆಯ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮನಸ್ಸು ಮಾಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ರಾಜಕೀಯ ವಲಯದಿಂದ ಹೊರಬಿದ್ದಿದ್ದು, ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ಸುಮಾರು ಆರು ಗಂಟೆಗಳ ಕಾಲ ನಡೆದ ಸುದೀರ್ಘ ಮ್ಯಾರಾಥಾನ್ ಸಭೆಯಲ್ಲಿ ರಾಜ್ಯ ನಾಯಕತ್ವ ಬದಲಾವಣೆ ಕುರಿತು ಗಂಭೀರ ಚರ್ಚೆಗಳು ನಡೆದಿವೆ. ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಸಭೆ ಸ್ಥಾನ ನೀಡುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಮುಕ್ತ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಕೇಂದ್ರ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರ ಸುದೀರ್ಘ ಆಡಳಿತಾತ್ಮಕ ಅನುಭವವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಹೈಕಮಾಂಡ್ ಈ ಆಫರ್ ನೀಡಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಸಭೆಯಲ್ಲಿ ಈ ಪ್ರಸ್ತಾವನೆಗೆ ಸಿದ್ದರಾಮಯ್ಯ ತಕ್ಷಣಕ್ಕೆ ಯಾವುದೇ ಸ್ಪಷ್ಟ ಸಮ್ಮತಿ ಸೂಚಿಸಿರಲಿಲ್ಲ ಎನ್ನಲಾಗಿದೆ.
ದೆಹಲಿ ಸಭೆ ಮುಗಿದ ಬೆನ್ನಲ್ಲೇ ಆಪ್ತ ಸಚಿವ ಕೆ.ಜೆ. ಜಾರ್ಜ್ ನಿವಾಸಕ್ಕೆ ತೆರಳಿದ ಸಿಎಂ ಸಿದ್ದರಾಮಯ್ಯ, ಅಲ್ಲಿ ತಮ್ಮ ಆಪ್ತ ಸಚಿವರು ಹಾಗೂ ಪ್ರಮುಖ ಶಾಸಕರೊಂದಿಗೆ ತುರ್ತು ರಹಸ್ಯ ಸಭೆ ನಡೆಸಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ನಡೆಸಿದ ಮಾತುಕತೆ ಹಾಗೂ ರಾಹುಲ್ ಗಾಂಧಿ ನೀಡಿದ ಆಫರ್ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಈ ವೇಳೆ ಹೈಕಮಾಂಡ್ ಸೂಚನೆಗೆ ಗೌರವ ಕೊಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ಸಿದ್ಧರಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಮತ್ತೊಂದೆಡೆ, ಸಿದ್ದರಾಮಯ್ಯ ಅವರ ಈ ನಿರ್ಧಾರಕ್ಕೆ ಅವರ ಆಪ್ತ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬಾರದು ಎಂದು ಸಚಿವರು ಮತ್ತು ಶಾಸಕರು ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿದ್ದಾರೆ. “ನಿಮ್ಮ ಪರವಾಗಿ ನಾವೇ ಖುದ್ದಾಗಿ ರಾಹುಲ್ ಗಾಂಧಿ ಅವರ ಬಳಿ ಹೋಗಿ ಮಾತನಾಡುತ್ತೇವೆ. ಈ ಹಂತದಲ್ಲಿ ರಾಜೀನಾಮೆ ನೀಡುವುದು ಸರಿಯಲ್ಲ” ಎಂದು ಆಪ್ತರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಆಪ್ತರ ಒತ್ತಾಯಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಹೈಕಮಾಂಡ್ ಶಿಸ್ತಿಗೆ ತಲೆಬಾಗುವ ಮುನ್ಸೂಚನೆ ನೀಡಿದ್ದಾರೆ. “ನಾನು ರಾಹುಲ್ ಗಾಂಧಿ ಅವರ ಮಾತನ್ನು ನಿರಾಕರಿಸಲು ಸಾಧ್ಯವಿಲ್ಲ. ಪಕ್ಷದ ಹಿರಿಯ ನಾಯಕರ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ನಾನು ರಾಜೀನಾಮೆ ನೀಡಲು ಸಿದ್ಧ, ನಿಮಗೇನಾದರೂ ಗೊಂದಲವಿದ್ದರೆ ನೀವೇ ಹೋಗಿ ಹೈಕಮಾಂಡ್ ಜೊತೆ ಮಾತನಾಡಿ” ಎಂದು ಆಪ್ತರಿಗೆ ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗಿದೆ.
ಈ ಹಠಾತ್ ರಾಜಕೀಯ ಬೆಳವಣಿಗೆಗಳು ಕೈ ಪಾಳಯದಲ್ಲಿ ತಲ್ಲಣ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಹೈಕಮಾಂಡ್ ರಾಜ್ಯ ನಾಯಕತ್ವದ ಕುರಿತು ಯಾವ ಅಂತಿಮ ನಿರ್ಧಾರ ಪ್ರಕಟಿಸಲಿದೆ ಎಂಬುದು ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ.