ವಿಜಯನಗರ: ಮದುವೆಯಾಗಿ ಕೇವಲ ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ನವವಿವಾಹಿತೆಯೊಬ್ಬರು ಪತಿಯ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಹರಪನಹಳ್ಳಿ ತಾಲೂಕಿನ ಗುಳೇದಹಟ್ಟಿ ತಾಂಡಾ ನಿವಾಸಿ ಕೌಶಲ್ಯ (೨೩) ಮೃತಪಟ್ಟ ದುರ್ದೈವಿ. ಈಕೆ ಪತಿ ಶಿವಕುಮಾರ್ ನಾಯ್ಕ್ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ. ಪತಿ ಶಿವಕುಮಾರ್ ನಾಯ್ಕ್ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೌಶಲ್ಯ ಅವರ ಸಾವು ಆತ್ಮಹತ್ಯೆಯಲ್ಲ, ಅದು ಕೊಲೆ ಎಂದು ಮೃತಳ ಪೋಷಕರು ಮತ್ತು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಪತಿ ಹಾಗೂ ಆತನ ಸಂಬಂಧಿಕರು ಸೇರಿ ಕೌಶಲ್ಯಳನ್ನು ಹೊಡೆದು ಕೊಲೆ ಮಾಡಿದ್ದು, ಬಳಿಕ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಶವವನ್ನು ನೇಣು ಹಾಕಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ನಾಲ್ಕು ತಿಂಗಳ ಹಿಂದಷ್ಟೇ ಹರಪನಹಳ್ಳಿಯ ಕಲ್ಯಾಣ ಮಂಟಪದಲ್ಲಿ ಇವರ ಮದುವೆ ಅದ್ದೂರಿಯಾಗಿ ನಡೆದಿತ್ತು. ಮದುವೆ ಸಂದರ್ಭದಲ್ಲಿ ಮೃತಳ ಕುಟುಂಬಸ್ಥರು ೧೮ ತೊಲೆ ಚಿನ್ನ ಹಾಗೂ ೩ ಲಕ್ಷ ರೂಪಾಯಿ ನಗದನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದರು. ಆದಾಗ್ಯೂ, ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಮತ್ತು ಆತನ ಮನೆಯವರು ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ.
ಇದರೊಂದಿಗೆ, ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು. ಕಳೆದ ಮೂರು ತಿಂಗಳಿನಿಂದ ಕೌಶಲ್ಯಳನ್ನು ತವರು ಮನೆಗೂ ಕಳುಹಿಸದೆ ಕೂಡಿ ಹಾಕಲಾಗಿತ್ತು ಎಂದು ಮೃತಳ ಪೋಷಕರು ಕಣ್ಣೀರಿಡುತ್ತಾ ದೂರಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸರ ಮುಂದಿನ ತನಿಖೆಯಿಂದಷ್ಟೇ ಹೊರಬರಬೇಕಿದೆ.