Skip to main content

Police Roundup

ಬ್ಯಾಂಕ್ ಸಾಲ ತೀರಿಸಲು ಶೆಡ್‌ನಲ್ಲಿ ಕೋಟಿ ಕೋಟಿ ಹಣ? ಪೊಲೀಸರ ತನಿಖೆಯಲ್ಲಿ ಹವಾಲಾ ದಂಧೆಯ ಶಂಕೆ!

Share News

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಾಖಲೆಗಳಿಲ್ಲದ ಕೋಟಿ ಕೋಟಿ ಅಕ್ರಮ ನಗದಿನ ಬೇಟೆಯಾಗಿದೆ. ನಗರದ ಕುರುಬರಹಳ್ಳಿಯ ಕೈಗಾರಿಕಾ ಶೆಡ್‌ ಒಂದರ ಮೇಲೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭರ್ಜರಿ ದಾಳಿ ನಡೆಸಿದ್ದು, ನಾಲ್ಕು ಬ್ಯಾಗ್‌ಗಳಲ್ಲಿ ಅಡಗಿಸಿಡಲಾಗಿದ್ದ ಬರೋಬ್ಬರಿ ₹2 ಕೋಟಿ 98 ಲಕ್ಷದ 900 ರೂಪಾಯಿ ನಗದನ್ನು ಜಪ್ತಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ನಾಗರಾಜ್ ಮತ್ತು ವೆಂಕಟೇಶ್ ಎಂಬುವವರನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

 

ಜೂನ್ 2 ರಂದು ಮಹಾಲಕ್ಷ್ಮೀ ಲೇಔಟ್ ಠಾಣೆಯ ಪಿಎಸ್‌ಐ ರಾಕೇಶ್ ಹಾಗೂ ಸಿಬ್ಬಂದಿ ಎಂದಿನಂತೆ ರಾತ್ರಿ ರೌಂಡ್ಸ್‌ನಲ್ಲಿದ್ದಾಗ, ಕುರುಬರಹಳ್ಳಿಯ ಶೆಡ್ ಒಂದರಲ್ಲಿ ಭಾರಿ ಪ್ರಮಾಣದ ನಗದು ಹಣವನ್ನು ಅಕ್ರಮವಾಗಿ ಬಚ್ಚಿಡಲಾಗಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರ ತಂಡ ಕುರುಬರಹಳ್ಳಿಯ 11ನೇ ಕ್ರಾಸ್‌ನಲ್ಲಿರುವ ‘ಶೇಷಾದ್ರಿ ಇಂಡಸ್ಟ್ರೀಸ್’ ಹೆಸರಿನ ಶೆಡ್‌ಗೆ ಲಗ್ಗೆ ಇಟ್ಟಿದೆ.

 

​ದಾಳಿ ನಡೆಸಿ ಶೆಡ್ ಪರಿಶೀಲಿಸಿದಾಗ ಪೊಲೀಸರಿಗೆ ಒಂದು ಕ್ಷಣ ನಂಬಲಾಗದ ದೃಶ್ಯ ಎದುರಾಗಿದೆ. ಅಲ್ಲಿ ತಲಾ ನಾಲ್ಕು ದೊಡ್ಡ ಬ್ಯಾಗ್‌ಗಳಲ್ಲಿ ಕಂತೆ ಕಂತೆ ನೋಟುಗಳನ್ನು ತುಂಬಿ ಇಡಲಾಗಿತ್ತು. ಬ್ಯಾಗ್‌ಗಳಲ್ಲಿದ್ದ ಕೋಟಿ ಕೋಟಿ ಹಣವನ್ನು ಕಂಡು ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಪಿಎಸ್‌ಐ ರಾಕೇಶ್ ಅವರು ಇನ್ಸ್‌ಪೆಕ್ಟರ್ ಹಾಗೂ ಹಿರಿಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದು, ಸ್ಥಳಕ್ಕೆ ಧಾವಿಸಿದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಇಡೀ ರಾತ್ರಿ ನೋಟು ಎಣಿಸುವ ಕಾರ್ಯ ನಡೆದಿದೆ. ಅಂತಿಮವಾಗಿ ಒಟ್ಟು ಮೊತ್ತ ₹2,98,00,900 (ಸುಮಾರು 3 ಕೋಟಿ ರೂ.) ಇರುವುದು ದೃಢಪಟ್ಟಿದೆ.

 

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಜಪ್ತಿ ಮಾಡಲಾದ ಈ ಕೋಟಿ ಕೋಟಿ ಹಣವು ಮೂಲತಃ ಬೆಂಗಳೂರಿನ ತಾವರೆಕೆರೆ ನಿವಾಸಿಯಾದ ನಾಗರಾಜ್ ಎಂಬಾತನಿಗೆ ಸೇರಿದ್ದಾಗಿದೆ. ನಾಗರಾಜ್ ಬಳಿ ಈ ಭಾರಿ ಮೊತ್ತದ ಹಣಕ್ಕೆ ಯಾವುದೇ ಅಧಿಕೃತ ದಾಖಲೆಗಳು ಇರಲಿಲ್ಲ. ಈ ಕಾರಣಕ್ಕಾಗಿ ಕುರುಬರಹಳ್ಳಿಯಲ್ಲಿರುವ ತನ್ನ ಸ್ನೇಹಿತ ವೆಂಕಟೇಶ್ ಎಂಬಾತನಿಗೆ ಸೇರಿದ ಇಂಡಸ್ಟ್ರಿಯಲ್ ಶೆಡ್‌ನಲ್ಲಿ ಅತ್ಯಂತ ರಹಸ್ಯವಾಗಿ ಈ ಹಣವನ್ನು ಬಚ್ಚಿಟ್ಟಿದ್ದ ಎಂಬುದು ಬೆಳಕಿಗೆ ಬಂದಿದೆ.

 

ಇಷ್ಟು ದೊಡ್ಡ ಪ್ರಮಾಣದ ನಗದು ಪತ್ತೆಯಾದ ತಕ್ಷಣ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಆದಾಯ ತೆರಿಗೆ (IT) ಇಲಾಖೆಯ ಅಧಿಕಾರಿಗಳಿಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ತದನಂತರ ನ್ಯಾಯಾಲಯದ ಅನುಮತಿಯನ್ನು ಪಡೆದು, ಕರ್ನಾಟಕ ಪೊಲೀಸ್ ಕಾಯ್ದೆ (KP Act) ಸೆಕ್ಷನ್ 98 ರ ಅಡಿಯಲ್ಲಿ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಿಸಿಕೊಳ್ಳಲಾಗಿದೆ. ಸದ್ಯ ಅಕ್ರಮ ಹಣವನ್ನು ಸೀಜ್ ಮಾಡಲಾಗಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.

 

ಬಂಧಿತ ಆರೋಪಿಗಳನ್ನು ಹಣದ ಮೂಲದ ಬಗ್ಗೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಅವರು ಯಾವುದೇ ಸಮರ್ಪಕವಾದ ದಾಖಲೆಗಳನ್ನು ಒದಗಿಸಿಲ್ಲ. ಬದಲಿಗೆ, ಬ್ಯಾಂಕಿನಲ್ಲಿರುವ ಸಾಲವನ್ನು ಮರುಪಾವತಿಸಲು ಈ ಹಣವನ್ನು ತಂದು ಇಲ್ಲಿ ಇಟ್ಟಿದ್ದೆವು ಎಂದು ಹಾರಿಕೆ ಉತ್ತರದ ನೆಪ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

 

​ಆದರೆ, ಬ್ಯಾಂಕ್ ಸಾಲ ತೀರಿಸಲು ಇಷ್ಟೊಂದು ದೊಡ್ಡ ಮೊತ್ತವನ್ನು ಶೆಡ್‌ನಲ್ಲಿ ಬ್ಯಾಗ್ ತುಂಬಿ ಇಡುವ ಅಗತ್ಯವೇನಿದೆ? ಈ ಹಣದ ಅಸಲಿ ಮಾಲೀಕ ಯಾರು? ಇದು ಹವಾಲಾ ದಂಧೆಯ ಹಣವೇ ಅಥವಾ ಇನ್ಯಾವುದೋ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದ್ದೇ? ಎಂಬ ಹಲವು ಆಯಾಮಗಳಲ್ಲಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin