ತುರುವೇಕೆರೆ: ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಸರಣಿ ಕಳ್ಳತನ ಎಸಗುತ್ತಿದ್ದ ಭೀಕರ ಅಂತರಜಿಲ್ಲಾ ಕಳ್ಳರ ಗ್ಯಾಂಗ್ ಒಂದನ್ನು ತುಮಕೂರು ಜಿಲ್ಲೆಯ ತುರುವೇಕೆರೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ₹14 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಲಯನ್ @ ಎಟಿಎಂ (29), ಮಂಜುನಾಥ್ @ ಮಾಗಡಿ ಮಂಜ (28), ಚಂದನ್ (19), ಮಧುಸೂದನ್ (24), ಬಾಬು (22) ಮತ್ತು ನರಸಿಂಹಮೂರ್ತಿ (32) ಎಂದು ಗುರುತಿಸಲಾಗಿದೆ.
ತುರುವೇಕೆರೆ ತಾಲೂಕಿನ ಮಾಯಸಂದ್ರ ಸಮೀಪದ ಜೋಡಿಕಟ್ಟೆ ಗ್ರಾಮದ ಬಸ್ ನಿಲ್ದಾಣದ ಬಳಿ ಈ ಆರೋಪಿಗಳ ತಂಡ ಮತ್ತೊಂದು ಕಳ್ಳತನಕ್ಕೆ ಸಂಚು ರೂಪಿಸುತ್ತಾ ಕುಳಿತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ತುರುವೇಕೆರೆ ಪೊಲೀಸರು ತಕ್ಷಣವೇ ಸ್ಥಳಕ್ಕೆ ದಾಳಿ ನಡೆಸಿ ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧನದ ವೇಳೆ ಆರೋಪಿಗಳ ಬಳಿ ಕೃತ್ಯಕ್ಕೆ ಬಳಸಲು ಸಿದ್ಧಪಡಿಸಿಕೊಂಡಿದ್ದ ಖಾರದ ಪುಡಿ ಹಾಗೂ ಮಚ್ಚು ಸೇರಿದಂತೆ ಮಾರಕಾಸ್ತ್ರಗಳು ಪತ್ತೆಯಾಗಿವೆ.
ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ದೇವಸ್ಥಾನಗಳ ಸರಣಿ ಕಳ್ಳತನದ ಕರಾಳ ಮುಖ ಬಯಲಾಗಿದೆ. ಆರೋಪಿಗಳು ತುಮಕೂರು, ಹಾಸನ ಹಾಗೂ ಮಂಡ್ಯ ಜಿಲ್ಲೆಗಳ ಬರೋಬ್ಬರಿ 22 ದೇವಸ್ಥಾನಗಳಲ್ಲಿ ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ. ದೇವಸ್ಥಾನಗಳ ಬೀಗ ಮುರಿದು ಒಳನುಗ್ಗುತ್ತಿದ್ದ ಈ ಖದೀಮರು, ದೇವರ ಮೂರ್ತಿಗಳ ಮೇಲಿದ್ದ ಚಿನ್ನದ ಆಭರಣಗಳು ಹಾಗೂ ದೇವಸ್ಥಾನದ ಹುಂಡಿ ಹಣವನ್ನು ಲೂಟಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಪೊಲೀಸರು ಭಾರಿ ಪ್ರಮಾಣದ ಮಾಲು ವಶಪಡಿಸಿಕೊಂಡಿದ್ದಾರೆ.
ಚಿನ್ನಾಭರಣ: ₹14 ಲಕ್ಷ ಅಂದಾಜು ಮೌಲ್ಯದ 86 ಗ್ರಾಂ ತೂಕದ 25 ಚಿನ್ನದ ತಾಳಿಗಳು.
ವಾಹನಗಳು: ಕೃತ್ಯಕ್ಕೆ ಬಳಸುತ್ತಿದ್ದ 3 ಬೈಕ್ಗಳು ಹಾಗೂ 1 ಆಟೋ ರಿಕ್ಷಾ.
ಈ ಯಶಸ್ವಿ ಕಾರ್ಯಾಚರಣೆ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಹಿಂದೆ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ. ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಸರಣಿ ಕಳ್ಳರ ಬಂಧನದಿಂದ ಸಾರ್ವಜನಿಕರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಗಳು ನಿಟ್ಟುಸಿರು ಬಿಡುವಂತಾಗಿದೆ.