ತುಮಕೂರು: ಅಪರಾಧಿ ಎಷ್ಟೇ ಚಾಣಾಕ್ಷನಾಗಿದ್ದರೂ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ತುಮಕೂರಿನಲ್ಲಿ ನಡೆದ ಈ ರೋಚಕ ಕೊಲೆ ಪ್ರಕರಣವೇ ಸಾಕ್ಷಿ. ಮೃತದೇಹದ ಕೈಯಲ್ಲಿದ್ದ ಕೇವಲ ಒಂದೇ ಒಂದು ತಲೆಗೂದಲಿನ ಆಧಾರದ ಮೇಲೆ ಪೊಲೀಸರು ಹಂತಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಅದು 2021ರ ಸಮಯ. ತುಮಕೂರಿನ ಪ್ರಸಿದ್ಧ ಅಮಾನಿಕೆರೆಯ ಫುಟ್ಪಾತ್ ಮೇಲೆ ಮಂಜುನಾಥ್ ಎಂಬಾತನ ರಕ್ತಸಿಕ್ತ ಶವ ಪತ್ತೆಯಾಗಿತ್ತು. ಮದ್ಯದ ನಶೆಯಲ್ಲಿ ಮಂಜುನಾಥನನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಹಂತಕ ಅಲ್ಲಿಂದ ಪರಾರಿಯಾಗಿದ್ದನು. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಯಾವುದೇ ಪ್ರಮುಖ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಸಿಕ್ಕಿದ್ದು ಕೇವಲ ಒಂದು ರಕ್ತಸಿಕ್ತ ಶರ್ಟ್ ಪೀಸ್ ಮತ್ತು ಮೃತನ ಕೈ ಬೆರಳುಗಳ ಮಧ್ಯೆ ಸಿಲುಕಿಕೊಂಡಿದ್ದ ಕೇವಲ ಒಂದೇ ಒಂದು ತಲೆಗೂದಲು ಮಾತ್ರ!
ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಶಿವಕುಮಾರ್ ಅಲಿಯಾಸ್ ಮಾಲಾಶ್ರೀ ಎಂಬಾತನ ಮೇಲೆ ಅನುಮಾನ ವ್ಯಕ್ತವಾಗಿತ್ತು. ಆದರೆ ಆತನನ್ನು ಬಂಧಿಸಲು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿತ್ತು. ಈ ವೇಳೆ ಪೊಲೀಸರು ಹೈಟೆಕ್ ವಿಜ್ಞಾನದ ಮೊರೆ ಹೋದರು. ಮೃತನ ಕೈಯಲ್ಲಿದ್ದ ಆ ಒಂದು ತಲೆಗೂದಲು ಹಾಗೂ ಶಂಕಿತ ಆರೋಪಿ ಶಿವಕುಮಾರನ ತಲೆಗೂದಲನ್ನು ಡಿಎನ್ಎ (DNA) ಪರೀಕ್ಷೆಗೆ ರವಾನಿಸಲಾಯಿತು.
ಲ್ಯಾಬ್ ರಿಪೋರ್ಟ್ನಲ್ಲಿ ಎರಡೂ ತಲೆಗೂದಲಿನ ಡಿಎನ್ಎ ಸಂಪೂರ್ಣವಾಗಿ ಮ್ಯಾಚ್ ಆಗಿತ್ತು! ಮಂಜುನಾಥ್ ಸಾಯುವ ಮುನ್ನ ಹಂತಕನ ಜೊತೆ ತೀವ್ರ ಹೋರಾಟ ನಡೆಸಿದ್ದ, ಆ ವೇಳೆ ಹಂತಕನ ತಲೆಗೂದಲು ಆತನ ಕೈಗೆ ಸಿಕ್ಕಿತ್ತು ಎಂಬುದು ವೈಜ್ಞಾನಿಕವಾಗಿ ಸಾಬೀತಾಯಿತು.
ಕೇವಲ ತಲೆಗೂದಲಿನ ಆಧಾರದ ಮೇಲೆ ನಡೆದ ಈ ರೋಚಕ ಪ್ರಕರಣದ ಸುದೀರ್ಘ ವಿಚಾರಣೆ ತುಮಕೂರು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಿತು. ಮೃತನ ಪರವಾಗಿ ಸರ್ಕಾರಿ ಅಭಿಯೋಜಕಿ ಕವಿತಾ ಅವರು ಭದ್ರವಾದ ಕಾನೂನು ಹೋರಾಟ ನಡೆಸಿ, ಡಿಎನ್ಎ ವರದಿಯ ಮಹತ್ವವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.
ಆರೋಪಿ ಶಿವಕುಮಾರ್ ಅಲಿಯಾಸ್ ಮಾಲಾಶ್ರೀಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ.
ಕೊಲೆಯಾದ ಮಂಜುನಾಥನ ವೃದ್ಧ ತಾಯಿಗೆ ಸೂಕ್ತ ಪರಿಹಾರದ ಮೊತ್ತವನ್ನು ನೀಡುವಂತೆ ಕೋರ್ಟ್ ಆದೇಶಿಸಿದೆ.
