ಚಿಕ್ಕಬಳ್ಳಾಪುರ: ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯವೊಂದರ ತೀರ್ಪು ತನ್ನ ಪರವಾಗಿ ಬರಲೆಂದು ಮಹಿಳಾ ನ್ಯಾಯಾಧೀಶರ ಆಸನದ (ಚೇರ್) ಮೇಲೆಯೇ ಮಾಟಮಂತ್ರ ಮಾಡಿದ್ದ ವೃದ್ಧೆಯೊಬ್ಬರನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ವಲಸಣ್ಣ ಬೀದಿಯ ನಿವಾಸಿಯಾದ ಮಂಜುಳಾ (65) ಬಂಧಿತ ಆರೋಪಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ನಗರದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಮಂಜುಳಾ ಎಂಬುವವರಿಗೆ ಸಂಬಂಧಿಸಿದ ಸಿವಿಲ್ ಪ್ರಕರಣವೊಂದರ ವಿಚಾರಣೆ ನಡೆಯುತ್ತಿತ್ತು. ಈ ವ್ಯಾಜ್ಯದಲ್ಲಿ ತಮಗೆ ಅನುಕೂಲಕರವಾಗಿ ತೀರ್ಪು ಬರಬೇಕೆಂಬ ದುರುದ್ದೇಶದಿಂದ, ಆರೋಪಿ ಮಹಿಳೆಯು ಎರಡು ದಿನಗಳ ಹಿಂದೆ ನ್ಯಾಯಾಧೀಶರ ಡಯಾಸ್ ಚೇರ್ ಮೇಲೆ ಮಂತ್ರಿಸಿದ ಬಿಳಿ ಸಾಸಿವೆಯನ್ನು ಚೆಲ್ಲಿ ಮಾಟಮಂತ್ರ ಮಾಡಿದ್ದರು.
ನ್ಯಾಯಾಧೀಶರ ಆಸನದ ಬಳಿ ಮಹಿಳೆ ಅನುಮಾನಾಸ್ಪದವಾಗಿ ನಡೆದುಕೊಂಡಿದ್ದ ಇಡೀ ಕೃತ್ಯವು ನ್ಯಾಯಾಲಯದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಾಟಮಂತ್ರ ಮಾಡಿರುವುದು ಸ್ಪಷ್ಟವಾಗಿ ಬೆಳಕಿಗೆ ಬಂದಿದೆ.
ಈ ಗಂಭೀರ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ನೇತ್ರಾ ಅವರು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ದೂರಿನ ಅನ್ವಯ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಮಂಜುಳಾಳನ್ನು ಬಂಧಿಸಿದ್ದಾರೆ.
ಬಂಧಿತ ಮಹಿಳೆಯ ವಿರುದ್ಧ ‘ಕರ್ನಾಟಕ ಅಮಾನವೀಯ ದುಷ್ಟಪದ್ಧತಿಗಳು ಮತ್ತು ವಾಮಾಚಾರ ಪ್ರತಿಬಂಧಕ ಹಾಗೂ ನಿರ್ಮೂಲನಾ ಕಾಯ್ದೆ-2017’ (Anti-Superstition Law) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ನ್ಯಾಯಾಲಯದ ಆವರಣದಲ್ಲೇ ನಡೆದ ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.