ಬಳ್ಳಾರಿ: ಕರ್ನಾಟಕ ಅರಣ್ಯ ಇಲಾಖೆಯ ಬಳ್ಳಾರಿ ವಿಭಾಗದ ವತಿಯಿಂದ ಅಳಿವಿನಂಚಿನಲ್ಲಿರುವ ಅಪರೂಪದ “ಎರಬೂತ” (ಗ್ರೇಟ್ ಇಂಡಿಯನ್ ಬಸ್ಟರ್ಡ್ – GIB) ಪಕ್ಷಿಯ ಸಂರಕ್ಷಣೆ, ಸವಾಲುಗಳು ಹಾಗೂ ದೀರ್ಘಕಾಲೀನ ರಕ್ಷಣಾ ಕಾರ್ಯತಂತ್ರಗಳ ಕುರಿತು ಜುಲೈ 27ರಂದು ಕಮಲಾಪುರದ ದರೋಜಿ ಕರಡಿ ಧಾಮದ ಪ್ರಕೃತಿ ನಿರೂಪಣಾ ಕೇಂದ್ರದಲ್ಲಿ ಬೃಹತ್ ಪ್ರಾದೇಶಿಕ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳು: ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್ ಪುಷ್ಕರ್ ಅವರು ಭಾಗವಹಿಸಲಿದ್ದಾರೆ.
ತಜ್ಞರ ಭಾಗವಹಿಸುವಿಕೆ: ಭಾರತೀಯ ವನ್ಯಜೀವಿ ಸಂಸ್ಥೆ (WII) ಹಾಗೂ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) ಸಂಸ್ಥೆಗಳ ಪ್ರಸಿದ್ಧ ವಿಜ್ಞಾನಿಗಳು ಮತ್ತು ಸಂರಕ್ಷಣಾ ಜೀವಶಾಸ್ತ್ರಜ್ಞರು ಕ್ಷೇತ್ರ ಮಟ್ಟದ ಅನುಭವ ಹಾಗೂ ವೈಜ್ಞಾನಿಕ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.
ಪ್ರಸ್ತುತ ಅಳಿವಿನಂಚಿನಲ್ಲಿರುವ ಎರಬೂತ ಪಕ್ಷಿ ಪ್ರಭೇದದ ಸ್ಥಿತಿಗತಿ ಹಾಗೂ ಸಂರಕ್ಷಣಾ ವಿಧಾನಗಳ ಬಗ್ಗೆ ಮಾಹಿತಿ ಹಂಚಿಕೆ.
ಪಕ್ಷಿ ಎದುರಿಸುತ್ತಿರುವ ಬೆದರಿಕೆಗಳು ಮತ್ತು ಸಂರಕ್ಷಣೆಗೆ ಇರುವ ಅವಕಾಶಗಳ ಗುರುತಿಸುವಿಕೆ.
ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಆವಾಸಸ್ಥಾನಗಳ ಪುನಶ್ಚೇತನಕ್ಕೆ ಪ್ರಾದೇಶಿಕ ಹಂತದ ಕಾರ್ಯತಂತ್ರ ರೂಪಿಸುವುದು.
ಉತ್ತರ ಕರ್ನಾಟಕ (ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕ) ಭಾಗದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ಮತ್ತು ವಿಜಯಪುರ ಸೇರಿ ಒಟ್ಟು 12 ಜಿಲ್ಲೆಗಳ ಅರಣ್ಯಾಧಿಕಾರಿಗಳು ಹಾಗೂ ಜಿಲ್ಲಾ ಆಡಳಿತ ವ್ಯವಸ್ಥೆ ಈ ಕಾರ್ಯಾಗಾರದಲ್ಲಿ ಕೈಜೋಡಿಸಲಿದೆ.
ಇದರೊಂದಿಗೆ ಪೊಲೀಸ್ ಮಹಾನಿರೀಕ್ಷಕರು, ಬಳ್ಳಾರಿ ಜಿಲ್ಲಾ ಆಡಳಿತದ ಹಿರಿಯ ಅಧಿಕಾರಿಗಳು, 12 ಜಿಲ್ಲೆಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (DCF), ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು (ACF), ಆಯ್ದ ವಲಯ ಅರಣ್ಯಾಧಿಕಾರಿಗಳು (RFO) ಹಾಗೂ ಉಪ ವಲಯ ಅರಣ್ಯಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಬಸವರಾಜ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.