Police Roundup

ಆಸ್ಪತ್ರೆಯಲ್ಲಿ ಸಾವಿನೊಂದಿಗೆ ಹೋರಾಡುತ್ತಿರುವ ಅಫ್ಘನ್ ಕ್ರಿಕೆಟ್ ಹೀರೋ ಶಪೂರ್ ಜದ್ರಾನ್: ಬದುಕುಳಿಯಲು ತೀವ್ರ ಸೆಣಸಾಟ

Share News

ನವದೆಹಲಿ: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಯಶೋಗಾಥೆಗೆ ಗಟ್ಟಿ ಅಡಿಪಾಯ ಹಾಕಿದ ಆರಂಭಿಕ ದಿನಗಳ ಧೀಮಂತ ವೇಗದ ಬೌಲರ್ ಶಪೂರ್ ಜದ್ರಾನ್ (38) ಸದ್ಯ ತೀವ್ರ ಅನಾರೋಗ್ಯದಿಂದಾಗಿ ದೆಹಲಿಯ ಆಸ್ಪತ್ರೆಯೊಂದರಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅಪರೂಪದ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಅವರು, ಕಳೆದ ಐದು ತಿಂಗಳುಗಳಿಂದ ಹಾಸಿಗೆ ಹಿಡಿದಿದ್ದು, ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವರದಿಯಾಗಿದೆ.

 

ಅಪರೂಪದ ‘HLH’ ಕಾಯಿಲೆಗೆ ತುತ್ತಾದ ಕ್ರಿಕೆಟಿಗ

​ಉದ್ದನೆ ಕೂದಲು, ನೀಳಕಾಯದ ಆಕ್ರಮಣಕಾರಿ ಬೌಲಿಂಗ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಮನ ಸೆಳೆದಿದ್ದ ಶಪೂರ್ ಜದ್ರಾನ್ ಅವರಿಗೆ ‘ಹಿಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್’ (HLH) ಎಂಬ ಅಪರೂಪದ ಕಾಯಿಲೆ ಇರುವುದು ಪತ್ತೆಯಾಗಿದೆ. ಈ ಕಾಯಿಲೆ ತಗುಲಿದರೆ ದೇಹದ ರೋಗನಿರೋಧಕ ಶಕ್ತಿಯೇ ಉಲ್ಟಾ ಕೆಲಸ ಮಾಡಲು ಆರಂಭಿಸುತ್ತದೆ. ರೋಗದ ವಿರುದ್ಧ ಹೋರಾಡಬೇಕಾದ ಬಿಳಿ ರಕ್ತಕಣಗಳು ದೇಹದ ಪ್ರಮುಖ ಅಂಗಾಂಗಗಳ ಮೇಲೆಯೇ ದಾಳಿ ನಡೆಸುತ್ತವೆ. ಈ ಕಾಯಿಲೆಗೆ ತುತ್ತಾದವರು ಬದುಕುವ ಸಾಧ್ಯತೆ ಕೇವಲ ಶೇ. 40 ರಿಂದ 60 ರಷ್ಟಿರುತ್ತದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

 

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಕಾಬೂಲ್‌ನ ತಮ್ಮ ನಿವಾಸದಲ್ಲಿ ಶಪೂರ್ ಜದ್ರಾನ್ ಹಠಾತ್ ಕುಸಿದು ಬಿದ್ದಿದ್ದರು. ಅಲ್ಲಿನ ವೈದ್ಯರು ಪರಿಸ್ಥಿತಿ ಗಂಭೀರವಾಗಿರುವುದನ್ನು ಕಂಡು ತಕ್ಷಣವೇ ಭಾರತಕ್ಕೆ ಕರೆದೊಯ್ಯುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಜನವರಿ ತಿಂಗಳಲ್ಲಿ ಪತ್ನಿ ಹಾಗೂ ಅಫ್ಘಾನಿಸ್ತಾನ ತಂಡದ ಮಾಜಿ ನಾಯಕ ಅಸ್ಘರ್ ಅಫ್ಘಾನ್ ಅವರೊಂದಿಗೆ ದೆಹಲಿಗೆ ಬಂದಿದ್ದ ಶಪೂರ್ ಅವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

 

​ಆರಂಭದ 20 ದಿನಗಳ ಚಿಕಿತ್ಸೆ ಬಳಿಕ ಗುಣಮುಖರಾಗಿ ಹೋಟೆಲ್‌ಗೆ ಶಿಫ್ಟ್ ಆಗಿದ್ದರೂ, ದುರದೃಷ್ಟವಶಾತ್ ಇನ್ಫೆಕ್ಷನ್ ಮೆದುಳಿಗೆ ಹಬ್ಬಿದ ಕಾರಣ ಮತ್ತೆ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಅಂದಿನಿಂದ ಇಂದಿನವರೆಗೆ ಅವರು ಪ್ರಜ್ಞಾಹೀನ ಸ್ಥಿತಿಯಲ್ಲೇ ಹಾಸಿಗೆಯಲ್ಲಿದ್ದಾರೆ. ಇತ್ತೀಚೆಗೆ ಅಫ್ಘನ್ ಕ್ರಿಕೆಟ್ ತಾರೆಗಳಾದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ಆಸ್ಪತ್ರೆಗೆ ಭೇಟಿ ನೀಡಿ, ಶಪೂರ್ ಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ.

 

ಅಂತರರಾಷ್ಟ್ರೀಯ ವೃತ್ತಿಜೀವನ: 2009 ರಿಂದ 2020 ರವರೆಗೆ ಸತತ 11 ವರ್ಷಗಳ ಕಾಲ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಎಡಗೈ ವೇಗದ ಬೌಲರ್ ಆಗಿ ಸೇವೆ ಸಲ್ಲಿಕೆ.

​ಐತಿಹಾಸಿಕ ಹೆಜ್ಜೆ: 2015 ರ ಏಕದಿನ ವಿಶ್ವಕಪ್‌ಗೆ ಅಫ್ಘಾನಿಸ್ತಾನ ಮೊದಲ ಬಾರಿಗೆ ಪಾದಾರ್ಪಣೆ ಮಾಡಿದಾಗ ತಂಡದ ಪ್ರಮುಖ ಅಸ್ತ್ರವಾಗಿದ್ದವರು ಇದೇ ಶಪೂರ್.

​ಹೋರಾಟದ ಹಿನ್ನೆಲೆ: ಅಫ್ಘಾನಿಸ್ತಾನದಲ್ಲಿ ಹುಟ್ಟಿ, ನಿರಾಶ್ರಿತರಾಗಿ ಪಾಕಿಸ್ತಾನದ ಪೇಶಾವರದಲ್ಲಿ ಆಶ್ರಯ ಪಡೆದು, ಅಲ್ಲಿಯೇ ಕ್ರಿಕೆಟ್ ಕಲಿತು ಕಠಿಣ ಪರಿಶ್ರಮದಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು.

 

ಇವತ್ತು ಜಾಗತಿಕ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ತಂಡ ಇತಿಹಾಸ ಸೃಷ್ಟಿಸುತ್ತಿದೆ ಎಂದರೆ, ಅದಕ್ಕೆ ಅಡಿಪಾಯ ಹಾಕಿದ ಆರಂಭಿಕ ನಾಯಕರಲ್ಲಿ ಶಪೂರ್ ಜದ್ರಾನ್ ಪ್ರಮುಖರು. ಮೈದಾನದಲ್ಲಿ ಅಪ್ರತಿಮ ಹೋರಾಟ ಪ್ರದರ್ಶಿಸುತ್ತಿದ್ದ ಈ ಕ್ರಿಕೆಟ್ ಹೀರೋ, ಜೀವನದ ಈ ಕಠಿಣ ಹೋರಾಟದಲ್ಲೂ ಗೆದ್ದು ಬರಲಿ ಎಂದು ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin