ಅನಂತಪುರ/ಬೆಂಗಳೂರು: ಪೋಷಕರು ಮದುವೆ ಮಾಡಬಹುದೆಂಬ ಅತಿಯಾದ ಆತಂಕಕ್ಕೆ ಒಳಗಾದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಜರುಗಿದೆ.
ಅನಂತಪುರ ಜಿಲ್ಲೆಯ ಗಾರ್ಲದಿನ್ನೆ ಮಂಡಲದ ಮರ್ತಾದ್ ಗ್ರಾಮದ ರೂಪಕೀರ್ತನಾ (17) ಮೃತಪಟ್ಟ ದುರ್ದೈವಿ. ಈಕೆ ಇತ್ತೀಚೆಗಷ್ಟೇ ಪ್ರಥಮ ಪಿಯುಸಿ ಪರೀಕ್ಷೆ ಮುಗಿಸಿ ಬೇಸಿಗೆ ರಜೆಯಲ್ಲಿದ್ದಳು. ಮನೆಯಲ್ಲಿ ಪೋಷಕರು ಮಗಳಿಗೆ ಉತ್ತಮ ಸಂಬಂಧ ಬಂದರೆ ಮದುವೆ ಮಾಡುವ ಬಗ್ಗೆ ಸಾಧಾರಣವಾಗಿ ಚರ್ಚೆ ನಡೆಸುತ್ತಿದ್ದರು ಎನ್ನಲಾಗಿದೆ.
ಹೆತ್ತವರ ಚರ್ಚೆಯನ್ನು ಕೇಳಿಸಿಕೊಂಡ ರೂಪಕೀರ್ತನಾ, “ನನಗೆ ಈಗಲೇ ಮದುವೆ ಬೇಡ, ನಾನು ಇನ್ನೂ ಓದಬೇಕು” ಎಂದು ಪೋಷಕರಲ್ಲಿ ಪಟ್ಟು ಹಿಡಿದಿದ್ದಳು. ಪೋಷಕರು ಕೇವಲ ಮಾತುಕತೆ ನಡೆಸಿದ್ದರೇ ಹೊರತು ಯಾವುದೇ ಮದುವೆ ನಿಶ್ಚಯಿಸಿರಲಿಲ್ಲ ಅಥವಾ ಆಕೆಗೆ ಬಲವಂತ ಮಾಡಿರಲಿಲ್ಲ. ಆದರೆ, ಎಲ್ಲಿ ಪೋಷಕರು ತನಗೆ ಬಲವಂತವಾಗಿ ಮದುವೆ ಮಾಡಿಬಿಡುತ್ತಾರೋ ಎಂಬ ವಿಪರೀತ ಭಯ ಆಕೆಯನ್ನು ಕಾಡತೊಡಗಿತ್ತು. ಇದೇ ಆತಂಕದಲ್ಲಿ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ರೂಪಕೀರ್ತನಾಳನ್ನು ತಕ್ಷಣವೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಆಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಮಗಳ ಓದಿಗೆ ಅಡ್ಡಿಯಾಗಬಾರದೆಂದು ಪೋಷಕರು ಅಂದುಕೊಳ್ಳುವ ಮೊದಲೇ, ಕೇವಲ ಮದುವೆಯ ಭಯದಿಂದ ಪ್ರತಿಭಾವಂತ ವಿದ್ಯಾರ್ಥಿನಿ ಬಾರದ ಲೋಕಕ್ಕೆ ಪಯಣಿಸಿರುವುದು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.