ಪ್ರೀತಿ-ಪ್ರೇಮದ ಹೆಸರಿನಲ್ಲಿ ಮದುವೆಯಾಗುವುದಾಗಿ ನಂಬಿಸಿ, ಬಳಿಕ ಜಾತಿಯ ಕಾರಣ ನೀಡಿ ಪೊಲೀಸ್ ಪೇದೆಯೊಬ್ಬ ವಂಚಿಸಿದ್ದಾನೆ ಎಂದು ಆರೋಪಿಸಿ ನೊಂದ ಯುವತಿಯೊಬ್ಬರು ಪೊಲೀಸ್ ಠಾಣೆಯ ಮುಂಭಾಗವೇ ಮೌನ ಪ್ರತಿಭಟನೆ ನಡೆಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ದಿನೇಶ್ ಯಾದವ್ ಎಂಬಾತನೇ ವಂಚನೆಯ ಆರೋಪ ಎದುರಿಸುತ್ತಿರುವ ಯುವಕ. ತನಗೆ ನ್ಯಾಯ ಬೇಕು ಮತ್ತು ದಿನೇಶ್ ತನ್ನನ್ನು ಮದುವೆಯಾಗಬೇಕು ಎಂದು ಆಗ್ರಹಿಸಿ ಸಂತ್ರಸ್ತ ಯುವತಿ ಲಕ್ಷ್ಮಿ ನೇತೃತ್ವದಲ್ಲಿ ಹಾಗೂ ASSK ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಎಂ. ಸಂದೇಶ್ ಅವರ ಮಾರ್ಗದರ್ಶನದಲ್ಲಿ ಬೆಳ್ಳಂದೂರು ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿ ಅಳಲು ತೋಡಿಕೊಂಡ ನೊಂದ ಯುವತಿ ಲಕ್ಷ್ಮಿ, “ನನಗೂ ಮತ್ತು ದಿನೇಶ್ ಯಾದವ್‌ಗೂ ಕಳೆದ ನಾಲ್ಕು ವರ್ಷಗಳಿಂದ ಪರಿಚಯವಿತ್ತು. ನಾವಿಬ್ಬರೂ ಒಂದೇ ಗ್ರಂಥಾಲಯದಲ್ಲಿ (ಲೈಬ್ರರಿ) ಒಟ್ಟಿಗೆ ವಿದ್ಯಾಭ್ಯಾಸ ಮಾಡುತ್ತಿದ್ದೆವು. ಈ ಅವಧಿಯಲ್ಲಿ ನನ್ನನ್ನು ಪ್ರೀತಿಸಿ, ಮದುವೆಯಾಗುವುದಾಗಿ ದಿನೇಶ್ ನಂಬಿಸಿದ್ದ. ಆದರೆ ಈಗ ಕೆಲಸ ಸಿಕ್ಕ ಬಳಿಕ, ‘ನಮ್ಮಿಬ್ಬರ ಜಾತಿಗಳು ಬೇರೆ ಬೇರೆ, ನಮ್ಮ ಪೋಷಕರು ಈ ಮದುವೆಗೆ ಒಪ್ಪುತ್ತಿಲ್ಲ’ ಎಂಬ ಕ್ಷುಲ್ಲಕ ಕಾರಣ ನೀಡಿ ಮದುವೆಯಿಂದ ಹಿಂದೆ ಸರಿಯುತ್ತಿದ್ದಾನೆ. ದಿನೇಶ್ ಯಾದವ್ ನನ್ನನ್ನು ಮದುವೆಯಾಗುವವರೆಗೂ ನನ್ನ ಈ ಹೋರಾಟ ನಿಲ್ಲುವುದಿಲ್ಲ” ಎಂದು ಕಣ್ಣೀರಿಡುತ್ತಾ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ASSK ರಾಜ್ಯಾಧ್ಯಕ್ಷ ಕೆ.ಎಂ. ಸಂದೇಶ್ ಅವರು, ಪ್ರೀತಿಯ ಹೆಸರಿನಲ್ಲಿ ನಂಬಿಸಿ ವಂಚಿಸಿರುವ ಪೊಲೀಸ್ ಪೇದೆಯಿಂದ ಯುವತಿಗೆ ಭಾರಿ ಅನ್ಯಾಯವಾಗಿದೆ. ನೊಂದ ಯುವತಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವ ಏಕೈಕ ಉದ್ದೇಶದಿಂದ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಸಂತ್ರಸ್ತೆಗೆ ನ್ಯಾಯ ಸಿಗುವವರೆಗೂ ಸಂಘಟನೆಯು ಬೆಂಬಲವಾಗಿ ನಿಲ್ಲಲಿದೆ ಎಂದು ತಿಳಿಸಿದರು.
ಕಾನೂನು ರಕ್ಷಣೆ ಮಾಡಬೇಕಾದ ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಈ ರೀತಿಯ ಗಂಭೀರ ಆರೋಪ ಎದುರಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಬೆಳ್ಳಂದೂರು ಠಾಣೆಯ ಹಿರಿಯ ಅಧಿಕಾರಿಗಳು ಪ್ರಕರಣದ ಕುರಿತು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.